ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ...

magadi love case
Published on

ರಾಮನಗರ: ಗಂಡನೊಂದಿಗೆ ಜಗಳ ಮಾಡಿಕೊಂಡು ತವರು ಸೇರಿದ್ದ ಮಹಿಳೆಯೊಬ್ಬಳು ಅದೇ ಊರಿನ ವ್ಯಕ್ತಿ ಜತೆ ದುರಂತ ಅಂತ್ಯ ಕಂಡ ಘಟನೆ ಮಾಗಡಿ ತಾಲೂಕಿನ ದಾಸೇಗೌಡನಪಾಳ್ಯ ಗ್ರಾಮದಲ್ಲಿ ಸಂಭವಿಸಿದೆ.

ಬ್ಯಾಲಕೇರಿ ಗ್ರಾಮದ ಶ್ರೀನಿವಾಸ್(35) ಮತ್ತು ಪುಷ್ಪಲತಾ(32) ಮೃತ ದುರ್ದೈವಿಗಳು. ಬ್ಯಾಲಕೇರಿ ಗ್ರಾಮದ ಗೆಂಡಯ್ಯ ಎಂಬುವವನ‌ ಜತೆ 6 ವರ್ಷದ ಹಿಂದೆ ದಾಸೇಗೌಡನಪಾಳ್ಯ ಗ್ರಾಮದ ಪುಷ್ಪಲತಾಗೆ ಮದುವೆ ಆಗಿತ್ತು. ಶ್ರೀನಿವಾಸ್​ಗೂ ಬೇರೆಯವರ ಜತೆ ಮದುವೆ ಆಗಿ, ಒಂದು ಮಗು ಇದೆ. ಶ್ರೀನಿವಾಸ್​ ಪತ್ನಿ 2ನೇ ಮಗುವಿನ ಗರ್ಭಿಣಿಯಾಗಿದ್ದಾರೆ. ವಾರದ ಹಿಂದೆ ಗಂಡನೊಂದಿಗೆ ಜಗಳಮಾಡಿಕೊಂಡ ಪುಷ್ಪಲತಾ, ದಾಸೇಗೌಡನಪಾಳ್ಯದ ತವರು ಮನೆ ಸೇರಿಕೊಂಡಿದ್ದಳು.

ದಾಸೇಗೌಡನಪಾಳ್ಯ ಗ್ರಾಮದಲ್ಲಿ ಟ್ರ್ಯಾಕ್ಟರ್ ಚಾಲಕನಾಗಿದ್ದ ಬ್ಯಾಲಕೇರಿಯ ಶ್ರೀನಿವಾಸ್​ಗೆ ಮದುವೆ ಆಗಿ ಪತ್ನಿ ಮಗು ಇದ್ದರೂ ಪುಷ್ಪಲತಾಳ ಮೇಲೆ ಪ್ರೀತಿ ಹುಟ್ಟಿತ್ತು. ಗಂಡ ಇದ್ದರೂ ಪುಷ್ಪಲತಾ, ಶ್ರೀನಿವಾಸ್​ನನ್ನು ಪ್ರೀತಿಸುತ್ತಿದ್ದಳು.ಇಬ್ಬರೂ ಒಟ್ಟಿಗೆ ವಾಸಿಸುವ ನಿರ್ಧಾರ ಮಾಡಿದ್ದರು ಎನ್ನಲಾಗಿದೆ.

ಭಾನುವಾರ ಬೆಳಗ್ಗೆಯಿಂದ ಫೋನಿನಲ್ಲೇ ಮಾತಾಡುತ್ತಿದ್ದ ಪ್ರೇಮಿಗಳು, ಸಂಜೆ ಒಟ್ಟಿಗೆ ಭೇಟಿಯಾಗಲು ಗ್ರಾಮದ ಹೊರವಲಯಕ್ಕೆ ಹೋಗಿದ್ದರು. ಈ ವೇಳೆ ಮೊದಲು ಪುಷ್ಪಲತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಪುಷ್ಪಾಲತಾಳ ಶವವನ್ನು ಕೆಳಗಿಸಿ ಬಳಿಕ ಶ್ರೀನಿವಾಸ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕುದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಶ್ರೀನಿವಾಸ್​ರ ಪತ್ನಿಗೆ ಗಂಡನ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಪರಸ್ತ್ರೀ ಜತೆಗೆ ತನ್ನ ಗಂಡ ಆತ್ಮಹತ್ಯೆ ಮಾಡಿಕೊಂಡ ಎಂಬ ಮತ್ತೊಂದ ಕಹಿ ಸತ್ಯ ಆಕೆಯನ್ನ ಇನ್ನಷ್ಟು ಕುಗ್ಗಿಸಿದ್ದು, ಇದೆಂಥಾ ಕೆಲಸ ಮಾಡಿಬಿಟ್ಟಿರಿ? ಅಯ್ಯೋ ದುರ್ವಿಧಿಯೇ, ನನ್ನ ಮಗು ಅಪ್ಪ ಎಲ್ಲಿ ಅಂದ್ರೆ ಏನು ಹೇಳೋದು? ನನ್ನ ಹೊಟ್ಟೆಯಲ್ಲಿರುವ ಕಂದ ಹೊರ ಬಂದಾಗ ಏನು ಹೇಳಲಿ? ಗಂಡನ ಬದುಕಿನ ಹಳಿ ತಪ್ಪಿದ್ದೆಲ್ಲಿ? ಎಂದು ನೋವಿನಲ್ಲೇ ಮರಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net