

ಕೋಲಾರ: ಸರ್ಕಾರ ಒಂದು ಬಾರಿ ಮೈಕ್ರೋ ಫೈನಾನ್ಸ್ಗಳ ಮೇಲೆ ಗದಾ ಪ್ರಹಾರ ನಡೆಸಿದರೆ ಹಾವಳಿ ತಪ್ಪುತ್ತದೆ. ಇದರಿಂದ ಜನ ದಿವಾಳಿ ಆಗುವುದನ್ನು ತಡೆಯಬಹುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನವ ನಿಮಾರ್ಣ ರಾಜಕೀಯ ಆಂದೋಲನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಒಂದು ವೇಳೆ ಮೈಕ್ರೋ ಫೈನಾನ್ಸ್ಗಳನ್ನು ರದ್ದು ಮಾಡಲು ಮುಂದಾಗದಿದ್ದರೆ ನಾವೇ ಬಂದು ಮಾಡಿ ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ಮೈಕ್ರೋ ಫೈನಾನ್ಸ್ ಹಾವಳಿಯಿಂದಾಗಿ ಆತ್ಮಹತ್ಯೆಗಳು ನಡೆಯುತ್ತಿವೆ. ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದರೂ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗದೆ, ಫೈನಾನ್ಸ್ಗಳಿಗೂ ಸರ್ಕಾರಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿದರು.
ಎಲ್ಲ ಸರ್ಕಾರಗಳು ಸಹ ಕಾರ್ಪೊರೇಟ್ ಕಂಪನಿಗಳ ಪರ ಇವೆ. ದೇಶ, ನಾಡು ಕಟ್ಟುವ ಪರ ಯಾವ ಪಕ್ಷವೂ ಸಹ ಇಲ್ಲ. ಅಧಿಕಾರದಲ್ಲಿರುವ ರಾಜಕೀಯ ಪಕ್ಷದವರು ಈ ನಾಡಿಗೆ, ಜನರಿಗೆ ವಂಚನೆ ಮಾಡಿದ್ದಾರೆ. ಹೀಗಾಗಿ ನಾಡು ಕಟ್ಟುವ ಪ್ರತಿಜ್ಞೆಯ ಮೇರೆಗೆ ನವ ನಿಮಾರ್ಣ ರಾಜಕೀಯ ಆಂದೋಲನ ಆರಂಭಿಸಿದ್ದು, ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕೋರಿದರು.
ರಾಷ್ಟ್ರೀಯ ಪಕ್ಷಗಳ ಮುಖಂಡರು ನಾಡಿನ ಭಾಷೆ, ಜಲ, ಉದ್ಯೋಗದ ಪ್ರಮಾಣದ ಕುರಿತು ನಿಖರವಾಗಿ ಮಾತನಾಡುವುದಿಲ್ಲ. ಬಡತನ ಕಿತ್ತು ಹಾಕಲು ಏನು ಕಾರ್ಯಕ್ರಮಗಳಿವೆ?, ಬಜೆಟ್ನಲ್ಲಿಯೂ ರೈತರಿಗೆ ಏನೂ ನೀಡಿಲ್ಲ. ಉತ್ಪಾದನೆ ಹೆಚ್ಚಿಸಲು ಬಜೆಟ್ನಲ್ಲಿ ಆದ್ಯತೆ ನೀಡುತ್ತಾರೆಯೇ ಹೊರತು ಬೆಳೆಗಳಿಗೆ ನ್ಯಾಯ ಬದ್ಧವಾದ ಬೆಲೆಯನ್ನು ಕಾಪಾಡುವ ವಿಚಾರ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.
ಹೊಸ ಚಿಂತನೆ, ಪಕ್ಷದ ಅವಶ್ಯಯಿದೆ. ಪ್ರಣಾಳಿಕೆ ಬೆಂಗಳೂರಿನಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಜನರೊಂದಿಗೆ ತರ್ಕಬದ್ಧವಾಗಿ ಚರ್ಚೆ ನಡೆಸಿ ಅಂತಿಮ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುವುದು ಎಂದರು.
ದೇಶದ ಎಲ್ಲ ಆಡಳಿತದಲ್ಲಿ ಖಾಸಗಿಯವರು ನಿರ್ವಹಿಸದರೆ ಪ್ರಜಾಪ್ರಭುತ್ವ ಉಳಿಯಲು ಅಸಾಧ್ಯ. ಹೀಗಾಗಿ ಪ್ರಸ್ತುತ ಇಂತಹ ಸಂದರ್ಭದಲ್ಲಿ ಚಳುವಳಿಗಳು ಅಗತ್ಯವಿದ್ದು, ಪ್ರಸ್ತುತ ಸಂದರ್ಭಕ್ಕೆ ಪ್ರಾದೇಶಿಕ ಪಕ್ಷ ಅವಶ್ಯತೆಯಿದ್ದು, ಕೋಲಾರದಿಂದ ಆರಂಭವಾಗಿರುವ ಆಂದೋಲನವನ್ನು ಹಂತಹಂತವಾಗಿ ಕಟ್ಟುತ್ತಾ ನಾವು ಜಯಗಳಿಸುತ್ತೇವೆ ಎಂದರು.
ಸಭೆಯಲ್ಲಿ ದಲಿತ ಮುಖಂಡರಾದ ಮಾರಸಂದ್ರ ಮುನಿಯಪ್ಪ, ಎನ್.ಮೂರ್ತಿ, ಮೋಹನ್ ರಾಜ್, ಯಲ್ಲಪ್ಪ, ರಮೇಶ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ವೀರಭದ್ರಸ್ವಾಮಿ, ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಇದ್ದರು.