ತಾಯಿ- ಮಗಳ ಲವ್ವರ್ ಆ ಕೊಲೆ ಮಾಡಿದ್ದೇಕೆ? ರೀಲು ಬಿಟ್ಟ ತಾಯಿ.. ಕಥೆಯಲ್ಲಿದೆ ರೋಚಕ ಟ್ವಿಸ್ಟ್...

Murder
Published on

ಬರೇಲಿ: ಆಕೆ 19 ವರ್ಷದ ಯುವತಿ. ಹೆಸರು ಉಸ್ಮಾ. ನೆರೆಯಮನೆಯ ಕೌಶರ್ ಎಂಬಾತನೊಡನೆ ಸಂಬಂಧವಿಟ್ಟುಕೊಂಡಿದ್ದಳು. ಆದರೆ ಆ ನೆರೆಮನೆಯ ಪ್ರೇಮಿ ಆಕೆಯ ತಾಯಿಯೊಂದಿಗೂ ಲವ್ವಿಡವ್ವಿ ಇಟ್ಟುಕೊಂಡಿದ್ದ. ಆ ಯುವತಿ ತನ್ನನ್ನು ಮದುವೆಯಾಗಬೇಕೆಂದು ಆತನಿಗೆ ಒತ್ತಾಯಿಸಿದ್ದೇ ಆಕೆಗೆ ತಂದಿತು ನೋಡಿ ಕುತ್ತು.

ಆ ಯುವತಿಯ ತಾಯಿ ಮತ್ತು ಆಕೆಯ ಪ್ರೇಮಿ ಇಬ್ಬರೂ ಸೇರಿ ಯುವತಿಯ ಕೊಲೆಗೆ ಬಲೆ ಹೆಣೆದೇ ಬಿಟ್ಟರು. ಆ ಗುರುವಾರ ಕೌಶರ್ ಅವರ ಮನೆಗೆ ನುಗ್ಗಿದ. ಎಲ್ಲರೂ ಮಲಗಿದ್ದರು. ಉಸ್ಮಾಳನ್ನು ಆತ ಬೇರೆ ರೂಮಿಗೆ ಕರೆದೊಯ್ದ. ಉಸ್ಮಾಳ ತಾಯಿ ಹಾಗೂ ಆತ ಇಬ್ಬರೂ ಸೇರಿ ದುಪ್ಪಟ್ಟಾದಿಂದ ಆಕೆಯ ಕತ್ತು ಹಿಸುಕಿದರು. ಎಲ್ಲರ ಮುಂದೆ ರೀಲು ಬಿಟ್ಟು, ಘಟನೆಯ ಹಾದಿ ತಪ್ಪಿಸಬೇಕೆಂದು ಆ ಮಹಾತಾಯಿ ಆತನಿಗೆ ಚಾಕು ಕೊಟ್ಟು ತನಗೆ ಗಾಯಗೊಳಿಸುವಂತೆ ತಿಳಿಸಿದಳು. ಆತ ಅವರ ಮನೆಯಿಂದ ಹೊರಹೋದ ನಂತರ ಆಕೆ ದೊಡ್ಡ ದನಿಯಲ್ಲಿ ಕಿರುಚಿ ಎಲ್ಲರನ್ನೂ ಎಬ್ಬಿಸಿ ಮನೆಗೆ ನುಗ್ಗಿದ್ದ ಮೂವರು ಹಲ್ಲೆಕೋರರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ದಾಳಿಯಲ್ಲಿ ಉಸ್ಮಾ ಸಾವಿಗೀಡಾಗಿದ್ದಾಳೆ ಎಂದು ಕಥೆ ಹೇಳಿದ್ದಾಳೆ.

ಆದರೆ ಘಟನೆ ಕುರಿತು ತನಿಖೆ ನಡೆಸಿದ ಪೊಲೀಸರು ಮೂರೇ ಗಂಟೆಯಲ್ಲಿ ಈ ಪ್ರಕರಣವನ್ನು ಭೇದಿಸಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಸುಭಾಷ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬಸ್ತಿ ಗ್ರಾಮದಲ್ಲಿ  ಈ ಘಟನೆ ನಡೆದಿದೆ.  ಯುವತಿ ಉಸ್ಮಾಳ ಮನೆಗೆ ನುಗ್ಗಿದ್ದ ಮೂವರು ಹಲ್ಲೆಕೋರರು ಆಕೆಯನ್ನು ಕೊಲೆಮಾಡಿದ್ದು, ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಉಸ್ಮಾಳ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದರು. ದಾಳಿಯಲ್ಲಿ ಉಸ್ಮಾ ಸಾವನ್ನಪ್ಪಿದ್ದರೆ, ಮುಖೀಶಾ ಗಾಯಗೊಂಡಿದ್ದಾರೆ. ಘಟನೆಯ ಸಮಯದಲ್ಲಿ ಉಳಿದವರೆಲ್ಲರೂ ಮಲಗಿದ್ದರು. ಮುಖೀಷಾ ಕೂಗಿದಾಗ ಅವರು ಎಚ್ಚರಗೊಂಡರು. ಆಗ ಹಲ್ಲೆಕೋರರು ಮನೆ ಬಿಟ್ಟು ಹೋದರು ಎಂದು ತಿಳಿಸಿದ್ದಾರೆ.

ತಾಯಿ ಮತ್ತು ಮಗಳೊಂದಿಗಿನ ಕೌಶರ್ ಸಂಬಂಧದ ಬಗ್ಗೆ ಆತನ ಮನೆಯವರಿಗೆ ಗೊತ್ತಿತ್ತು. ಇದರಿಂದ ಆಗಾಗ ಅವರಲ್ಲಿ ವಾದ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ಗಂಟೆಗಳಲ್ಲಿ ಈ ಪ್ರಕರಣ ಬಗೆಹರಿಸಿರುವುದಾಗಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಪಾಂಡೆ ಹೇಳಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅಪರಾಧದಲ್ಲಿ ಬಳಸಿದ ದುಪಟ್ಟಾ ಮತ್ತು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net