

ಆಂಧ್ರಪ್ರದೇಶ: ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಪ್ರಿಯಕರನ ಮನೆಗೆ ರಾತ್ರೋರಾತ್ರಿ ನುಗ್ಗಿದ ಯುವತಿ ಕುಟುಂಬಸ್ಥರು ದಾಂಧಲೆ ನಡೆಸಿ ಬೆಂಕಿ ಇಟ್ಟು ಗಲಭೆ ಸೃಷ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಕಾರದಪುಡಿ ಎರಚಿ ವಿಕೃತಿ ಮೆರೆದಿದ್ದಾರೆ.
ಇಂತಹ ಘಟನೆ ಕರ್ನೂಲ್ ಜಿಲ್ಲೆಯ ತುಗ್ಗಲಿ ಪಂಚಾಯಿತಿ ವ್ಯಾಪ್ತಿಯ ಪಗಿಡಿರೈ ಗ್ರಾಮದಲ್ಲಿ ಸಂಭವಿಸಿದೆ. ಒಂದೇ ಗ್ರಾಮದ ಯುವತಿ-ಯುವತಿ ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿ ಕುಟುಂಬಸ್ಥರ ವಿರೋಧವಿತ್ತು. ಆದರೂ ಪ್ರೇಮಿಗಳಿಬ್ಬರೂ ಮದುವೆ ಮಾಡಿಕೊಂಡು ಗ್ರಾಮದಲ್ಲೇ ವಾಸವಿದ್ದರು.
ಇದೇ ವಿಚಾರಕ್ಕೆ ಕುಪಿತಗೊಂಡ ಯುವತಿ ಕುಟುಂಸ್ಥರು ಮತ್ತು ಅವರ ಕಡೆಯ ಕೆಲವರು ಒಟ್ಟಾಗಿ ಯುವಕನ ಮನೆ ಮೇಲೆ ರಾತ್ರೋರಾತ್ರಿ ದಾಳಿ ಮಾಡಿದ್ದಾರೆ. ಮನೆಗೂ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಮನೆಯಲ್ಲಿದ್ದ ಪರಿಕರಗಳು ಬೆಂಕಿಗಾಹುತಿಯಾಗಿವೆ. ಅಲ್ಲದೆ, 4 ಕಾರುಗಳೂ ಸುಟ್ಟು ಕರಕಲಾಗಿವೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಅವರ ಮೇಲೂ ಕಾರದಪುಡಿ ಎರಚಿ ತಪ್ಪಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.