

ಅಂದು ಜುಲೈ ತಿಂಗಳ ಅಮಾವಾಸ್ಯೆಯ ರಾತ್ರಿ. ಗುರುಗ್ರಾಮದ ಸಾಫ್ಟ್ವೇರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಅನಿತಾ (ಹೆಸರು ಬದಲಾಯಿಸಿದೆ) ತನ್ನ ಸ್ನೇಹಿತರೊಡನೆ ಪಬ್ವೊಂದಕ್ಕೆ ವಾರಾಂತ್ಯದ ಪಾರ್ಟಿ ಮಾಡಲು ಹೋಗಿದ್ದಳು. ಉತ್ತರ ಪ್ರದೇಶದ ಮೂಲದ ಆಕೆ ಅಪಾರ್ಟ್ವೆುಂಟ್ ಸಂಕೀರ್ಣವೊಂದರಲ್ಲಿದ್ದ ಸುಸಜ್ಜಿತ ಪಿ.ಜಿಯಲ್ಲಿ ವಾಸವಾಗಿದ್ದಳು. ಪಾರ್ಟಿಮುಗಿದ ನಂತರ ಅವಳ ಸ್ನೇಹಿತ ಬಿಸ್ವಜೀತ್ ಅವಳನ್ನು ತನ್ನ ಕಾರಿನಲ್ಲಿ ಮನೆಗೆ ಬಿಡುತ್ತೇನೆಂದು ಹೇಳಿ ಅವಳನ್ನು ಅವಳ ಮನೆಯ ಬಳಿ ಕರೆತಂದ. ಅಪಾರ್ಟ್ವೆುಂಟ್ ಸಂಕೀರ್ಣದ ಗೇಟಿನಿಂದ ಐವತ್ತು ಮೀಟರ್ ದೂರದಲ್ಲಿ ಕಾರನ್ನು ನಿಲ್ಲಿಸಿ ಅವಳೊಂದಿಗೆ ಹರಟೆ ಹೊಡೆಯತೊಡಗಿದ. ಆಗ ಸಮಯ ರಾತ್ರಿ ಒಂದು ಗಂಟೆಯಾಗಿತ್ತು. ಸುಮಾರು ಐದು ನಿಮಿಷಗಳ ತರುವಾಯ ಬಿಸ್ವಜೀತ್ನ ಕಾರಿನ ಪಕ್ಕದಲ್ಲಿ ಒಂದು ಬಿಳಿಯ ಬಣ್ಣದ ಸ್ಕೋಡಾ ಕಾರು ಬಂದು ನಿಂತಿತು.
ಅನಿತಾ ಮತ್ತು ಬಿಸ್ವಜೀತ್ರ ಗಮನ ಆ ಕಾರಿನತ್ತ ಹೋಯಿತು. ಅದರಲ್ಲಿ ನಾಲ್ಕೈದು ಜನರಿದ್ದರು. ಅವರಲ್ಲೊಬ್ಬ ದಡೂತಿ ಆಸಾಮಿ ಅದರಿಂದ ಕೆಳಗಿಳಿದು ಅನಿತಾಳ ಕಿಟಕಿಯ ಬಳಿ ಬಂದು ನಿಂತ. ‘ಕಾರಿನಿಂದ ಕೆಳಗಿಳಿ’ ಎಂದು ಕೈಸನ್ನೆಮಾಡಿದ. ಅನಿತಾಳಿಗೆ ಮುಂದೇನೋ ತೊಂದರೆಯುಂಟಾಗುತ್ತದೆ ಎಂಬ ಸಂದೇಹ ಬಂದಿತು.
ಅಷ್ಟರಲ್ಲಾಗಲೇ ಬಿಸ್ವಜೀತ್ ತನ್ನ ಕಾರನ್ನು ಚಾಲೂ ಮಾಡಿದ. ಅದೇ ಸಮಯಕ್ಕೆ ಸ್ಕೋಡಾ ಕಾರು ಅವನ ಕಾರನ್ನು ಅಡ್ಡಗಟ್ಟಿ ನಿಂತಿತು. ಹೆದರಿದ ಅನಿತಾ ದಡಬಡನೆ ಕಾರಿನಿಂದ ಕೆಳಗಿಳಿದು ಕೆಲವೇ ಮೀಟರ್ ದೂರದಲ್ಲಿದ್ದ ತನ್ನ ಅಪಾರ್ಟ್ವೆುಂಟ್ ಗೇಟಿನತ್ತ ಓಡತೊಡಗಿದಳು. ಆಗ ಸ್ಕೋಡಾ ಕಾರಿನಲ್ಲಿದ್ದ ಇಬ್ಬರು ಕಾರಿನಿಂದಿಳಿದು ಅನಿತಾಳನ್ನು ಅಟ್ಟಿಸಿಕೊಂಡು ಹೋಗಿ ಅವಳನ್ನು ಭದ್ರವಾಗಿ ಹಿಡಿದುಕೊಂಡರು. ಅವಳನ್ನು ದರದರನೆ ಎಳೆದುಕೊಂಡು ಬಂದು ತಮ್ಮ ಕಾರಿನಲ್ಲಿ ಕುಳ್ಳಿರಿಸಿದರು.
ಗಾಬರಿಯಾದ ಬಿಸ್ವಜೀತ್ ತನ್ನ ಕಾರಿನ ಎಂಜಿನ್ ಸ್ವಿಚ್ ಆಫ್ ಮಾಡಿ ‘ಇದೇನು ಮಾಡುತ್ತಿರುವಿರಿ’ ಎನ್ನುತ್ತ ಕೆಳಗಿಳಿದ. ಆಗ ಅದೇ ಕಾರಿನಲ್ಲಿದ್ದ ಇನ್ನೊಬ್ಬ ಅವನನ್ನೂ ಹಿಡಿದು ತಮ್ಮ ಕಾರಿನ ಹಿಂದಿನ ಸೀಟಿನಲ್ಲಿ ಅನಿತಾಳ ಪಕ್ಕವೇ ಕೂರಿಸಿದ. ಇಬ್ಬರೂ ಜೋರಾಗಿ ಕಿರುಚತೊಡಗಿದಾಗ ಅವರಿಗೆ ಚಾಕು ತೋರಿಸಿದ ದುಷ್ಕರ್ವಿುಗಳು, ಅರಚಿದರೆ ಅಲ್ಲಿಯೇ ಕೊಲ್ಲುವೆವೆಂದು ಬೆದರಿಸಿದರು. ಕಾರಿನ ಹಿಂದಿನ ಸೀಟಿನಲ್ಲಿ ಅನಿತಾ ಮತ್ತು ಬಿಸ್ವಜೀತ್ರ ಅಕ್ಕಪಕ್ಕದಲ್ಲಿ ಮೂವರು ರೌಡಿಗಳು ಕುಳಿತರು. ಮುಂದಿನ ಸಿಟಿನಲ್ಲಿ ಚಾಲಕನಲ್ಲದೆ ಇನ್ನೊಬ್ಬನಿದ್ದ.
ಕಾರು ಮುಂದಕ್ಕೆ ಹೋಗುತ್ತಲೇ ಆ ದುಷ್ಕರ್ವಿುಗಳು ಅನಿತಾಳ ಅಂಗಾಂಗಗಳನ್ನು ಮುಟ್ಟಿ ಅವಳನ್ನು ಚುಂಬಿಸುತ್ತ ಅವಳಿಗೆ ಲೈಂಗಿಕ ಕಿರುಕುಳ ಕೊಡಲಾರಂಭಿಸಿದರು. ಬಿಸ್ವಜೀತ್ ಮತ್ತು ಅನಿತಾ ವಿರೋಧಿಸಿದಾಗ ಅವರು ಅನಿತಾಳ ವೇಲ್ ಹೊರತೆಗೆದು ಅದರಿಂದ ಅವರಿಬ್ಬರ ಕೈಗಳನ್ನೂ ಕಟ್ಟಿದರು. ಕಾರಿನ ಕಿಟಕಿ ಹಾಕಿದ್ದರಿಂದ ಅವರಿಬ್ಬರೂ ಚೀರಾಡಿದ್ದು ಯಾರಿಗೂ ಕೇಳಲಿಲ್ಲ. ಸುಮಾರು ಒಂದು ಗಂಟೆಯ ಕಾಲ ಆ ಮಹಾನಗರದ ಬೇರೆ-ಬೇರೆ ಬಡಾವಣೆಗಳಲ್ಲಿ ಆ ಕಾರು ಸುತ್ತಿತು. ರಾತ್ರಿ ಎರಡೂವರೆ ಗಂಟೆಗೆ ದುಷ್ಕರ್ವಿುಗಳು ತಮ್ಮ ಕಾರನ್ನು ರೈಲ್ವೆ ಹಳಿಯ ಪಕ್ಕದಲ್ಲಿದ್ದ ನಿರ್ಜನ ಪ್ರದೇಶವೊಂದರಲ್ಲಿ ನಿಲ್ಲಿಸಿದರು. ಇಬ್ಬರಿಗೂ ಕಟ್ಟಿದ್ದ ಕೈಕಟ್ಟನ್ನು ತೆಗೆದು ಬಿಸ್ವಜೀತ್ನನ್ನು ಕಾರಿನಿಂದ ಕೆಳಗಿಳಿಸಿ ದೂರಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿದರು. ಅವನಿಗೆ ಕಾವಲು ನಿಂತರು.
ಏತನ್ಮಧ್ಯೆ ಕಾರಿನ ಚಾಲಕ ಅನಿತಾಳ ಪಕ್ಕಕ್ಕೆ ಬಂದು ಕುಳಿತ. ಅವಳನ್ನು ಸೀಟಿನ ಮೇಲೆ ಮಲಗಿಸಿ ಅವಳ ಮೇಲೆ ಅತ್ಯಾಚಾರ ಮಾಡತೊಡಗಿದ. ಅನಿತಾ ಹೋರಾಟ ಮಾಡತೊಡಗಿದಾಗ, ‘ನೀನೇನಾದರೂ ಕಿರುಚಿದರೆ ನನ್ನ ಜೊತೆಗಾರರು ಹೊರಗೆ ನಿಂತಿರುವ ನಿನ್ನ ಗೆಳೆಯನನ್ನು ಕೊಲೆ ಮಾಡುತ್ತಾರೆ ಹುಷಾರ್’ ಎಂದು ಬೆದರಿಸಿದ. ಅವನ ನಂತರ ಇನ್ನಿಬ್ಬರೂ ಅನಿತಾಳ ಮೇಲೆ ಅತ್ಯಾಚಾರವೆಸಗಿದರು. ಕಾರಿನಲ್ಲಿದ್ದ ಮೂರು ಜನರು ಮಾತ್ರ ಅನಿತಾಳ ಮೈಮುಟ್ಟಲಿಲ್ಲ. ಆನಂತರ ಅನಿತಾಳನ್ನು ಕೆಳಗಿಳಿಸಿದ ದುಷ್ಕರ್ವಿುಗಳು ತಮ್ಮ ಕಾರಿನಲ್ಲಿ ಹೊರಟು ಹೋದರು. ಗಾಬರಿಯಾಗಿದ್ದ ಅನಿತಾಳನ್ನು ಬಿಸ್ವಜೀತ್ ನಿಧಾನವಾಗಿ ನಡೆಸಿಕೊಂಡು ಹತ್ತಿರದ ರಸ್ತೆಗೆ ಬಂದ. ಅಲ್ಲೊಂದು ಆಟೋರಿಕ್ಷಾ ನಿಂತಿತ್ತು . ಅದನ್ನು ಹತ್ತಿದ ಅವರು ಹತ್ತಿರದ ಪೊಲೀಸ್ ಠಾಣೆಗೆ ಹೋದರು. ಆಗ ಬೆಳಗಿನ ಮೂರೂವರೆಯಾಗಿತ್ತು.
ಠಾಣೆಯ ಪ್ರಭಾರದಲ್ಲಿದ್ದ ಸಬ್ಇನ್ಸ್ಪೆಕ್ಟರ್ನಿಗೆ ಅನಿತಾ ಮತ್ತು ಬಿಸ್ವಜೀತ್ ನಡೆದ ವಿಷಯವನ್ನು ತಿಳಿಸಿದರು. ಸ್ಕೋಡಾ ಕಾರಿನ ನೋಂದಣಿ ಸಂಖ್ಯೆಯನ್ನು ಕೊಟ್ಟರು. ಕಾರಿನಲ್ಲಿದ್ದವರು ಉರ್ದು ಭಾಷೆಯಲ್ಲಿ ಮಾತನಾಡುತ್ತಿದ್ದರು, ಅವರಲ್ಲೊಬ್ಬನ ಹೆಸರು ನಾಸಿರ್ ಎಂದಾಗಿತ್ತು ಎಂದು ತಿಳಿಸಿದರು.
ದೂರನ್ನಾಲಿಸಿದ ಪಿ.ಎಸ್.ಐ, ‘ಮೇಡಂ, ನಿಮ್ಮ ಪರಿಸ್ಥಿತಿ ಕಂಡರೆ ನಿಮ್ಮ ಮೇಲೆ ರೇಪ್ ಆಗಿಲ್ಲ ಎನಿಸುತ್ತದೆ, ಅವರು ನಿಮ್ಮ ಖಾಸಗಿ ಅಂಗಗಳನ್ನು ಮುಟ್ಟಿರುವಂತೆ ಕಾಣುತ್ತದೆ, ಇದು ಮಾನಭಂಗದ ಕೇಸು, ರೇಪ್ ಕೇಸಲ್ಲ’ ಎಂದು ಹೇಳಿ ತನ್ನನ್ನು ಅಪರಿಚಿತ ವ್ಯಕ್ತಿಗಳು ಮಾನಭಂಗ ಮಾಡಿದ್ದಾರೆ ಎಂದು ಬರೆಯಲು ಅನಿತಾಳಿಗೆ ಹೇಳಿದ. ತನ್ನ ಮೇಲೆ ಅತ್ಯಾಚಾರ ಮಾಡಿದವನೊಬ್ಬನ ಹೆಸರನ್ನು ನಾಸಿರ್ ಎಂದು ಹೇಳಿದರೂ ಅವನ ಹೆಸರನ್ನು ಎಫ್.ಐ.ಆರ್ನಲ್ಲಿ ದಾಖಲಿಸದೆ ಅಪರಿಚಿತ ಆರೋಪಿಗಳು ಎಂದು ಬರೆದುಕೊಡಲು ತಿಳಿಸಿದ. ಸ್ಕೋಡಾ ಕಾರಿನ ಸಂಖ್ಯೆಯನ್ನು ಬಿಸ್ವಜೀತ್ ತಿಳಿಸಿದಾಗ ಅದನ್ನೂ ಬರೆದುಕೊಳ್ಳಲಿಲ್ಲ. ಕಾಟಾಚಾರಕ್ಕಾಗಿ ಆ ಅಧಿಕಾರಿ ಪ್ರಥಮ ವರ್ತಮಾನ ವರದಿಯನ್ನು ದಾಖಲು ಮಾಡಿದಂತೆ ಅನಿತಾಳಿಗೆ ಅನಿಸಿತು. ತನ್ನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲು ಅನಿತಾ ಕೋರಿದಾಗ, ಆ ಅಧಿಕಾರಿ ಒಪ್ಪಲಿಲ್ಲ.
ಪೊಲೀಸರ ಈ ಕ್ರಮದಿಂದ ರೊಚ್ಚಿಗೆದ್ದ ಅನಿತಾ ಬೆಳಗಾಗುವುದನ್ನೇ ಕಾಯುತ್ತಿದ್ದಳು. ಬೆಳಗಿನ ಎಂಟು ಗಂಟೆಗೆ ಆಕೆ ಬಿಸ್ವಜೀತ್ನ ಜತೆ ಕೂಡಲೇ ಗುರುಗ್ರಾಮದ ಪೊಲೀಸ್ ಕಮಿಷನರ್ರ ಮನೆಗೆ ಹೋಗಿ ನಡೆದ ವಿಷಯ ತಿಳಿಸಿದಳು. ಅವರು ಕೂಡಲೇ ಅನಿತಾಳನ್ನು ಸರ್ಕಾರಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಕಳಿಸಿದರು. ತಮ್ಮ ಬಂಗಲೆಗೇ ಸಂಬಂಧಪಟ್ಟ ಎ.ಸಿ.ಪಿಯನ್ನು ಕರೆಸಿ ತಕ್ಷಣ ಪೂರ್ವಭಾವಿ ವಿಚಾರಣೆಯನ್ನು ನಡೆಸಿ ವರದಿ ನೀಡಲು ಆದೇಶಿಸಿದರು.
ಅನಿತಾಳನ್ನು ಪರೀಕ್ಷಿಸಿದ ವೈದ್ಯರು ಅವಳ ಮೇಲೆ ಅತ್ಯಾಚಾರವಾಗಿರುವುದನ್ನು ಧೃಢೀಕರಿಸಿ ಮುಂಜಾನೆ 11 ಗಂಟೆಗೆ ತಮ್ಮ ವರದಿಯನ್ನು ನೀಡಿದರು. ಈ ಮಾಹಿತಿ ಬಂದಕೂಡಲೇ ಠಾಣೆಯ ಪ್ರಭಾರದಲ್ಲಿದ್ದ ಸಬ್ ಇನ್ಸ್ಪೆಕ್ಟರ್ನನ್ನು ಕೂಡಲೇ ಅಮಾನತುಗೊಳಿಸಿದ ಕಮಿಷನರ್ ಆತನ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ಕಲಂ 166 (ಎ)(ಸಿ) ಅನ್ವಯ ದಾಖಲು ಮಾಡಿಸಿದರು, ಈ ಮಾಹಿತಿಯನ್ನು ಅರಿತಕೂಡಲೇ ಪಿ.ಎಸ್.ಐ ಪರಾರಿಯಾದ. ಅನಿತಾ ಕೊಟ್ಟ ಎಫ್.ಐ.ಆರ್ಗೆ ರೇಪ್ ಸೆಕ್ಷನ್ ಸೇರಿಸಿ ಅದರ ತನಿಖೆಯನ್ನು ಎ.ಸಿ.ಪಿಯವರಿಗೆ ವಹಿಸಲಾಯಿತು.
ಏತನ್ಮಧ್ಯೆ ಅನಿತಾಳ ಕಚೇರಿಯ ಸಹೋದ್ಯೋಗಿಗಳು ಪತ್ತೇದಾರಿ ಕೆಲಸಕ್ಕಿಳಿದರು. ಒಂದು ವಾಟ್ಸ್ ಆಪ್ ಗುಂಪನ್ನು ಮಾಡಿಕೊಂಡು ಅನಿತಾಳ ಅತ್ಯಾಚಾರಿಗಳಿದ್ದ ಸ್ಕೋಡಾ ಕಾರಿನ ನಂಬರ್ ಕೊಟ್ಟು ಅದನ್ನು ಕಂಡ ಕೂಡಲೇ ತನಿಖಾಧಿಕಾರಿಗೆ ಮತ್ತು ಅನಿತಾಳಿಗೆ ಮಾಹಿತಿಯನ್ನು ಕೊಡಬೇಕು ಎಂದು ಎಲ್ಲ ಸದಸ್ಯರಿಗೂ ತಾಕೀತು ಮಾಡಿದರು. ಅವರೆಲ್ಲರೂ ದೆಹಲಿ ಮತ್ತು ಗುರುಗ್ರಾಮ ನಗರಗಳ ಪ್ರಮುಖ ಸ್ಥಳಗಳಲ್ಲಿ ಸ್ಕೋಡಾ ಕಾರನ್ನು ಹುಡುಕಲು ಪ್ರಾರಂಭಿಸಿದರು. ಮೂರು ದಿನಗಳ ಸತತ ಪ್ರಯತ್ನದ ತರುವಾಯ ಆ ಕಾರು ಅನಿತಾಳ ಮನೆಯ ಬಳಿಯಿದ್ದ ಒಂದು ಜಿಮ್ ಮುಂದೆ ನಿಂತಿದ್ದನ್ನು ಯಾರೋ ಕಂಡು ವಾಟ್ಸ್ಆಪ್ ಗುಂಪಿನಲ್ಲಿ ಸುದ್ದಿ ಹರಿಬಿಟ್ಟರು. ಹದಿನೈದು ನಿಮಿಷಗಳ ಒಳಗೆ ಅನಿತಾಳ ಆರೇಳು ಸಹೋದ್ಯೋಗಿಗಳು ಜಿಮ್ ಹೊರಗೆ ಬಂದು ಆ ಕಾರಿನ ಚಾಲಕನಿಗಾಗಿ ಕಾಯತೊಡಗಿದರು.
ಕೆಲ ಸಮಯದ ನಂತರ ಸುಮಾರು 30 ವರ್ಷದ ಒಬ್ಬ ವ್ಯಕ್ತಿ ಜಿಮ್ಂದ ಹೊರಬಂದು ತನ್ನ ಕಾರಿನ ಬಾಗಿಲನ್ನು ತೆರೆದು ಒಳಗೆ ಹೋಗತೊಡಗಿದಾಗ ಅನಿತಾಳ ಸಹೋದ್ಯೋಗಿಗಳು ಅವನ ಮೇಲೆ ಮುಗಿಬಿದ್ದು ಅವನನ್ನು ಮುಂದೆ ಹೋಗದಂತೆ ತಡೆದರು. ಕೂಡಲೇ ಪೊಲೀಸ್ ಕಂಟ್ರೋಲ್ ಕೋಣೆಗೆ ಕರೆಮಾಡಿದರು. ಹತ್ತು ನಿಮಿಷದಲ್ಲಿ ಪೊಲೀಸರು ಅಲ್ಲಿಗೆ ಬಂದು ಆ ವ್ಯಕ್ತಿಯನ್ನು ತಮ್ಮೊಡನೆ ಠಾಣೆಗೆ ಕರೆದೊಯ್ದರು. ಈ ಮಾಹಿತಿ ಪಡೆದ ಅನಿತಾ ಠಾಣೆಗೆ ಓಡಿ ಬಂದಳು.
ಪೊಲೀಸರು ಅನಿತಾಳನ್ನು ವಿಚಾರಿಸಿದಾಗ ಅದೇ ವ್ಯಕ್ತಿಯೇ ತನ್ನನ್ನು ಹಿಡಿದು ಕಾರಿನಲ್ಲಿ ಬಲವಂತವಾಗಿ ಕೂರಿಸಿದ್ದಾಗಿ ಹೇಳಿದಳು. ಆ ವ್ಯಕ್ತಿಯ ಹೆಸರು ಹಫೀಜ್ ಎಂದಾಗಿತ್ತು. ಅವನ ಮಾಹಿತಿಯ ಮೇರೆಗೆ ಅನಿತಾಳ ಮೇಲೆ ಬಲಾತ್ಕಾರ ಮಾಡಿದ ನಾಸಿರ್ ಮತ್ತು ಸುಹೇಲ್ ಅಲ್ಲದೆ ಅವರ ಇನ್ನಿಬ್ಬರ ಸ್ನೇಹಿತರನ್ನೂ ತನಿಖಾಧಿಕಾರಿ ಬಂಧಿಸಿದರು. ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಂಬಂಧಪಟ್ಟ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಯಿತು.
ಮುಂದಿನ ತನಿಖೆಯನ್ನು ಮುಗಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಯಿತು. ಸುಮಾರು ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಯಿತು. ನ್ಯಾಯಾಧೀಶರು ಅನಿತಾಳ ಮೇಲೆ ಅತ್ಯಾಚಾರ ಮಾಡಿದ್ದ ನಾಸಿರ್ ಮತ್ತು ಸುಹೇಲ್ಗೆ 14 ವರ್ಷಗಳ ಕಠಿಣ ಶಿಕ್ಷೆ, ಹಫೀಜ್ನಿಗೆ 10 ವರ್ಷ ಜೈಲುವಾಸ ಮತ್ತು ಉಳಿದ ಮೂವರಿಗೆ ತಲಾ ಒಂದು ವರ್ಷದ ಜೈಲುಶಿಕ್ಷೆ ವಿಧಿಸಿದರು. ಅಮಾನತ್ತುಗೊಂಡ ಪೊಲೀಸ್ ಅಧಿಕಾರಿ ನ್ಯಾಯಾಲಯದಿಂದ ಬಿಡುಗಡೆಯಾದರೂ ಇಲಾಖಾ ವಿಚಾರಣೆ ಮಾಡಿ ಅವನನ್ನು ಸೇವೆಯಿಂದ ವಜಾ ಮಾಡಲಾಯಿತು.
ಈ ಪ್ರಕರಣ ತಾರ್ಕಿಕ ಅಂತ್ಯ ಕಂಡದ್ದಕ್ಕೆ ಪ್ರಮುಖ ಕಾರಣವೇ ಸಂತ್ರಸ್ತೆ ಅನಿತಾಳ ಛಲ. ಇತರ ಸಂತ್ರಸ್ತೆಯರಂತೆ ಆಕೆ ಸುಮ್ಮನಿರಲಿಲ್ಲ. ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ತಪ್ಪು ದಾಖಲಿಸಿದಾಗ ಆಕೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಕೊಟ್ಟ ಕಾರಣವೇ ತಪ್ಪಿತಸ್ಥರಿಗೆ ಶಿಕ್ಷೆಯಾದದ್ದು. ಅವಳ ಸಹೋದ್ಯೋಗಿಗಳೂ ಅವಳ ಬೆಂಬಲಕ್ಕೆ ಬಂದಿದ್ದೂ ಅಪರಾಧಿಗಳಿಗೆ ಶಿಕ್ಷೆಯಾಗಲು ಅನುಕೂಲವಾಯಿತು. ನಮ್ಮ ಮೇಲೆ ಅಪರಾಧ ನಡೆದರೆ ಸುಮ್ಮನೆ ಕೂಡುವುದು ತರವಲ್ಲ. ಆರೋಪಿಗಳ ಪತ್ತೆ ಮತ್ತು ಶಿಕ್ಷೆಗೆ ನೊಂದವರೂ ಸಹಕರಿಸಿದಾಗಲೇ ಆರೋಪಿಗಳಿಗೆ ಶಿಕ್ಷೆ ಸಾಧ್ಯ. ‘ಅನ್ಯಾಯವನ್ನು ಮಾಡುವವರಿಂದ ಈ ಜಗತ್ತು ಹಾಳಾಗುವುದಿಲ್ಲ; ಆದರೆ ಯಾರು ಏನನ್ನೂ ಮಾಡದೇ ಅನ್ಯಾಯವನ್ನು ಸಹಿಸಿಕೊಳ್ಳುವವರೋ ಅವರಿಂದ ಹಾಳಾಗುತ್ತದೆ’ ಎಂದ ಹೆಸರಾಂತ ಚಿಂತಕ, ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್. ಇದನ್ನು ನಾವೆಲ್ಲರೂ ಅರಿಯಬೇಕು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)