ಗ್ಯಾರಂಟಿ ಹೊರೆ ಅಭಿವೃದ್ಧಿಗೆ ಬರೆ ಸಾಲಕ್ಕೆ ಮೊರೆ; ಆದಾಯ ಮೂಲಗಳನ್ನು ಕಂಡುಕೊಳ್ಳಲು ಸರ್ಕಾರ ಪರದಾಟ, ತೆರಿಗೆ ವಸೂಲಿಗೆ ಪ್ರಯಾಸ

Shakthi Scheme
Published on

ವಿಲಾಸ ಮೇಲಗಿರಿ, ಬೆಂಗಳೂರು

ಬಡ, ಮಧ್ಯಮ ವರ್ಗದ ಬದುಕನ್ನು ಸುಧಾರಿಸಲು ಹಾಗೂ ಆರ್ಥಿಕತೆಯ ಚಲನಶೀಲತೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ದೊಡ್ಡ ಮೊತ್ತದ ಉಚಿತ ಯೋಜನೆಗಳನ್ನು (ಫ್ರೀಬೀಸ್) ಜಾರಿಗೊಳಿಸಿದೆ. ಆದರೆ 3 ಲಕ್ಷ ಕೋಟಿ ರೂಪಾಯಿ ಬಜೆಟ್​ನಲ್ಲಿ ಫ್ರೀಬೀಸ್​ಗೆ 59 ಸಾವಿರ ಕೋಟಿ ರೂ. ಹೊಂದಿಸುವಲ್ಲಿ ಸರ್ಕಾರ ನೆಮ್ಮದಿ ಕಳೆದುಕೊಂಡಿದೆ.

ರಾಜ್ಯದ ಬರೋಬ್ಬರಿ 1.30 ಕೋಟಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳ ನೆರವು ದೊರೆಯುತ್ತಿದೆ. ಶಕ್ತಿ ಯೋಜನೆಯಿಂದ ಧಾರ್ವಿುಕ ಪ್ರವಾಸೋದ್ಯಮ ಕ್ಷಿಪ್ರ ವೃದ್ಧಿ ಕಂಡಿದೆ. ಗೃಹಲಕ್ಷಿ್ಮೕ ಯೋಜನೆಯಿಂದ ಮಹಿಳಾ ಸ್ವಾವಲಂಬನೆ ಜತೆಗೆ ಯಶೋಗಾಥೆಗಳೂ ಕಣ್ಣಮುಂದಿವೆ. ಗೃಹಲಕ್ಷಿ್ಮೕ ಹಣದಿಂದ ಗ್ರಾಮದೇವತೆಗೆ ಬೆಳ್ಳಿಕಿರೀಟ ತೊಡಿಸಿದ್ದು, ಕೊಳವೆಬಾವಿ ಕೊರೆಯಿಸಿದ್ದು, ಊರಿಗೆ ಹೋಳಿಗೆ ಊಟ ಹಾಕಿಸಿದ್ದು, ಸೊಸೆಗೆ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟದ್ದು, ರೋಟಾವೇಟರ್ ಖರೀದಿ, ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ... ಹೀಗೆ ಹಲವು ಯಶೋಗಾಥೆಗಳಿಗೆ ಗ್ಯಾರಂಟಿಗಳು ಸಾಕ್ಷಿಯಾಗಿವೆ. ಅನ್ನಭಾಗ್ಯ ಬಡಜನರ ಹೊಟ್ಟೆ ತುಂಬಿಸಿದೆ. ಗೃಹಜ್ಯೋತಿ ಅನೇಕ ಮನೆಗಳನ್ನು ಬೆಳಗಿದೆ. ಆದರೆ, ಶಕ್ತಿ, ಗೃಹಜ್ಯೋತಿ ಹೊರತುಪಡಿಸಿದಂತೆ ಉಳಿದ ಗ್ಯಾರಂಟಿಗಳು ಕಾಲಮಿತಿಯಲ್ಲಿ ಜನರಿಗೆ ತಲುಪುತ್ತಿಲ್ಲ ಎಂಬುದೂ ದಿಟ. ‘ಯುವನಿಧಿ’ಗೆ ನಿರೀಕ್ಷಿತ ನೋಂದಣಿ ಆಗಿಲ್ಲ. ‘ಗೃಹಲಕ್ಷಿ್ಮ’ ಯೋಜನೆಯ ಹಣ ಮೂರು ತಿಂಗಳಾದರೂ ಫಲಾನುಭವಿಗಳಿಗೆ ಮುಟ್ಟಿಲ್ಲ. ಗೃಹಜ್ಯೋತಿ ಹಣ ಪಾವತಿಯಾಗದ ಕಾರಣ ಎಸ್ಕಾಂಗಳು ‘ಶಕ್ತಿ’ ಕಳೆದುಕೊಂಡಿವೆ. ಅನ್ನಭಾಗ್ಯದಡಿ 5 ಕೆಜಿ ಅಕ್ಕಿಗೆ ಬದಲಾಗಿ ನೀಡುತ್ತಿರುವ ತಲಾ 170 ರೂ. ಫಲಾನುಭವಿಗಳ ಕೈಸೇರುತ್ತಿಲ್ಲ. ಮೂರು ತಿಂಗಳ ಬಾಕಿ ಇದ್ದು, ಹಣ ಹೊಂದಿಸಲಾಗದೆ ಸರ್ಕಾರ ಕೈ ಕೈ ಹಿಸುಕಿಕೊಳ್ಳುತ್ತಿದೆ. ಪ್ರತಿಪಕ್ಷಗಳು ಸರ್ಕಾರ ವಿರುದ್ಧ ಮುಗಿಬಿದ್ದಿವೆ. ಗ್ಯಾರಂಟಿ ಬಿಡುಗಡೆಗೆ ಕ್ಯಾಲೆಂಡರ್ ಪ್ರಕಟಿಸುವಂತೆ ಬೀದಿಗಿಳಿದಿವೆ.

ಹಲವು ಯೋಜನೆಗಳಿಗೆ ಕೊಕ್: ಗ್ಯಾರಂಟಿ ಯೋಜನೆಗಳ ಕಾರಣ ಸರ್ಕಾರ ರೈತ ವಿದ್ಯಾನಿಧಿ, ರೈತ ಸಮ್ಮಾನ್​ಗೆ ರಾಜ್ಯ ಸರ್ಕಾರ ನೀಡುತ್ತಿದ್ದ ನೆರವು, ಶ್ರಮಶಕ್ತಿ ಯೋಜನೆಗಳನ್ನು ಹಿಂದೆ ಮುಂದೆ ನೋಡದೆ ಕೈಬಿಟ್ಟಿದೆ. ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆಯಂತೂ ಗೊಂದಲದ ಗೂಡಾಗಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸಿದಾಗ ರಾಜ್ಯ ಸರ್ಕಾರ ಅಕ್ಕಿ ಖರೀದಿಗೆ ಪರದಾಡಿತು. ಎಲ್ಲೂ ಅಕ್ಕಿ ಸಿಗದೆ ಕೊನೆಗೆ ಕೈಚೆಲ್ಲಿ 5 ಕೆಜಿ ಅಕ್ಕಿ ಬದಲು ಡಿಬಿಟಿ ಮೂಲಕ 170 ರೂ. ವರ್ಗಾಯಿಸುವ ಒತ್ತಡಕ್ಕೆ ಸಿಲುಕಿತು. ಈ ಯೋಜನೆಯಡಿ 59.56 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ. 2024-25ರಲ್ಲಿ ಸೆಪ್ಟಂಬರ್​ವರೆಗೆ 5 ಕೆಜಿ ಅಕ್ಕಿ ಜತೆಗೆ 9775 ಕೋಟಿ ರೂ. ಡಿಬಿಟಿ ಮಾಡಲಾಗಿದೆ. ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುವ ಖಾತ್ರಿ ಕೊಟ್ಟಿರುವುದರಿಂದ ಸರ್ಕಾರ ತುಸು ನಿರಾಳವಾಗಿದೆ. ಅನ್ನಭಾಗ್ಯ ಯೋಜನೆಯ 3 ತಿಂಗಳ ಬಾಕಿ ಹಣವನ್ನು ತಕ್ಷಣವೇ ನೀಡುವ ಭರವಸೆಯನ್ನು ನೀಡಿ ಎರಡು ವಾರ ಕಳೆದರೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.

ಅನ್ಯ ಉದ್ದೇಶಕ್ಕೆ ಬಳಕೆ: ಈ ನಡುವೆ ಗ್ಯಾರಂಟಿ ಸರಿದೂಗಿಸಲು ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆ ಸೇರಿದ ಸುಮಾರು 11 ಸಾವಿರ ಕೋಟಿ ರೂ.ಗಳನ್ನು ಬಳಸಿಕೊಂಡಿದ್ದು, ಇದಕ್ಕೆ ದಲಿತ ಸಮುದಾಯದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮನೆ ಮನೆಗೆ ಬೆಳಕು: ರಾಜ್ಯದ 1.62 ಕೋಟಿ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. 2024ರ ಡಿಸೆಂಬರ್ ಅಂತ್ಯಕ್ಕೆ ಎಸ್ಕಾಂಗಳಿಗೆ ಸರ್ಕಾರ 12,589 ಕೋಟಿ ರೂ. ಬಿಡುಗಡೆ ಮಾಡಿದೆ. ಹಣ ಬಿಡುಗಡೆ ಮಾಡದ ಕಾರಣ ಜೆಸ್ಕಾಂ ಗ್ರಾಹಕರಿಂದ ವಿದ್ಯುತ್ ಶುಲ್ಕ ವಸೂಲು ಮಾಡಲು ಅವಕಾಶ ಕೋರಿ ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದೂ ಉಂಟು.

1.22 ಕೋಟಿ ಗೃಹಲಕ್ಷಿ್ಮಯರು: ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡಲಾಗುತ್ತದೆ. ಈ ಯೋಜನೆಗೆ 1.22 ಕೋಟಿ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಈ ವರ್ಷ 35,180 ಕೋಟಿ ರೂಪಾಯಿ (ಅಕ್ಟೋಬರ್​ವರೆಗೆ) ವಿತರಣೆ ಮಾಡಲಾಗಿದೆ. ಮೂರು ತಿಂಗಳ ಬಾಕಿಗೆ ಮಹಿಳೆಯರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ಮಹಿಳೆಯರಿಗೆ ಉಚಿತ ಪ್ರಯಾಣ ಖಚಿತ: ಶಕ್ತಿ ಯೋಜನೆ ಆರಂಭವಾದಾಗಲೂ ಆರೋಪ-ಪ್ರತ್ಯಾರೋಪ ಕೇಳಿ ಬಂದವು. ಅದೇನೇ ಇರಲಿ 387 ಕೋಟಿ ಫಲಾನುಭವಿಗಳು ಉಚಿತವಾಗಿ ಬಸ್​ನಲ್ಲಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ಈ ಆರ್ಥಿಕ ವರ್ಷದ ಜನವರಿ 31ರವರೆಗೆ ಸರ್ಕಾರ 9352 ಕೋಟಿ ರೂ. ಬಿಡುಗಡೆ ಮಾಡಿದೆ. ಸಾರಿಗೆ ನಿಗಮಗಳಿಗೆ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡದೇ ಇದ್ದರೂ ಮಹಿಳೆಯರ ಪ್ರಯಾಣ ಮಾತ್ರ ಸುಗಮವಾಗಿ ಸಾಗಿದೆ.

ಯುವನಿಧಿ ಕನಿಷ್ಠ ನೋಂದಣಿ...: ಪದವೀಧರ, ಡಿಪ್ಲೋಮಾ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯೋಜನೆಗೆ 2.37 ಲಕ್ಷ ನಿರುದ್ಯೋಗಿಗಳು ನೋಂದಾಯಿಸಿ ಕೊಂಡಿದ್ದು, ಫಲಾನುಭವಿಗಳಿಗೆ ವಿತರಿಸಲು ಸರ್ಕಾರ ಡಿಸೆಂಬರ್ 2024ರ ಅಂತ್ಯಕ್ಕೆ 252 ಕೋಟಿ ರೂ. ಬಿಡುಗಡೆ ಮಾಡಿದೆ. ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಆಗಿಲ್ಲ. ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಯಷ್ಟು ತೆರಿಗೆ ಸಂಗ್ರಹ ಕಷ್ಟವಾಗಿದೆ. ಹಾಗಾಗಿ ಸರ್ಕಾರ ಗ್ಯಾರಂಟಿ ಸರಿದೂಗಿಸಲು ಸರ್ಕಸ್ ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net