

ಕಳಸ: ಈ ಬಾರಿಯ ಮಳೆಗೆ ಬಿದ್ದು ಹೋದ ನಿವೃತ ಶಿಕ್ಷಕರ ಮನೆ ತಡೆಗೋಡೆಯನ್ನು ಸರ್ಕಾರದಿಂದ ನಿರ್ಮಿಸಿಕೊಡುವಂತೆ ಹಿರೆಬೈಲು ಶಾಲೆ ಹಳೆ ವಿದ್ಯಾರ್ಥಿಗಳು ಕಳಸ ತಹಸೀಲ್ದಾರ್ ಗೆ ಪತ್ರ ಬರೆದಿದ್ದಾರೆ.
ಕಳಸ ಓಣಿಗಂಡಿಯಲ್ಲಿ ನಿವೃತ ಶಿಕ್ಷಕ ಭಾಸ್ಕರ್ ಡೋಂಗ್ರೆ ಮನೆ ಕಟ್ಟಿ ವಾಸವಾಗಿದ್ದರು.ಮನೆ ರಕ್ಷಣೆಗಾಗಿ ಕಳೆದ ಒಂದು ವರ್ಷದ ಹಿಂದೆಯಷ್ಟೆ ಮೂರು ಲಕ್ಷ ಖರ್ಚು ಮಾಡಿ ತಡೆಗೋಡೆ ನಿರ್ಮಿಸಿಕೊಂಡಿದ್ದರು.ಈ ತಡೆ ಗೋಡೆ ಜುಲೈ 19ರಂದು ಸುರಿದ ಮಳೆಗೆ ನೆಲಕ್ಕಚ್ಚಿ ಹೋಗಿತ್ತು.ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳು ಮನೆ ಬಿದ್ದು ಹೋದರೆ ಮಾತ್ರ ಸರ್ಕಾರದಿಂದ ಪರಿಹಾರಕ್ಕೆ ಅವಕಾಶ ಇದೆ ತಡೆಗೋಡೆಗೆ ಇಲ್ಲ ಎಂಬ ಮಾತು ಬಂದಿತ್ತು. ಇದರಿಂದ ಶಿಕ್ಷಕ ದಂಪತಿಗಳು ಬೇಸರ ಗೊಂಡಿದ್ದರು. ಮತ್ತೆ ತಡೆಗೋಡೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತಿದ್ದರು.ಇದನ್ನು ಗಮನಿಸಿದ ಹಳೆ ವಿದ್ಯಾರ್ಥಿಗಳು ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದಾರೆ.
ನಮಗೆ 1996 ರಿಂದ 1999ರ ವರೆಗೆ ಹಿರೇಬೈಲಿನಲ್ಲಿ ಹಿಂದಿ ಶಿಕ್ಷಕರಾಗಿ ಭಾಸ್ಕರ್ ಡೋಂಗ್ರೆ ನಮಗೆ ಶಿಕ್ಷಣ ನೀಡಿದ್ದರು. ಅವರ ವಾಸದ ಮನೆ ತಡೆಗೋಡೆ ಈ ಮಳೆಗಾಲದಲ್ಲಿ ಬಿದ್ದು ಹೋಗಿರುತ್ತದೆ. ತನ್ನ ನಿವೃತ್ತಿಯ ಪಿಂಚಣಿಯಿಂದ ಜೀವನ ನಡೆಸುತ್ತಿದ್ದಾರೆ. ಅವರ ಜೀವನಕ್ಕೆ ಆಧಾರವಾಗಿರುವ ಮನೆ ರಕ್ಷಣೆಗಾಗಿ ಸರ್ಕಾರದ ಯಾವುದಾದರೂ ನಿಧಿಯಿಂದ ತಡೆಗೋಡೆ ನಿರ್ಮಿಸಿಕೊಟ್ಟು ಹಲವಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಈ ನಿವೃತ್ತ ಶಿಕ್ಷ ದಂಪತಿಗಳಿಗೆ ಜೀವನ ಸಂಧ್ಯಾ ಕಾಲದಲ್ಲಿ ನೆಮ್ಮದಿ ಒದಗಿಸಿಕೊಡಬೇಕು ಎಂದು ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಕೆ.ನಿರಂಜನ್ ಎಂಬುವವರು ಪತ್ರದಲ್ಲಿ ಕೇಳಿಕೊಂಡಿದ್ದಾರೆ.