

ಶ್ರೀರಂಗಪಟ್ಟಣ : ತಾಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ಗುರುವಾರ ಬಾದಾಮಿ ಅಮಾವಾಸ್ಯೆ ಪ್ರಯುಕ್ತ 5ನೇ ವರ್ಷದ ಶ್ರೀ ಶಕ್ತಿ ಶನೈಶ್ಚರಸ್ವಾಮಿ ದೇವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ದೇವಾಲಯದಲ್ಲಿ ದೇವರ ಗುಡ್ಡಪ್ಪ ಗೌತಮ ಅವರ ನೇತೃತ್ವದಲ್ಲಿ ಮುಂಜಾನೆ ಛಾಯ-ಸೂರ್ಯ ಪುತ್ರನಿಗೆ ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾಭಿಷೇಕ ಬಳಿಕ ನವಗ್ರಹ ಹಾಗೂ ಶಾಂತಿ ಹೋಮ ಅರ್ಪಿಸಿದ್ದು, ಯಾತ್ರದಾನ ಪೂರ್ವಕ ಶ್ರೀ ಶನೈಶ್ಚರಸ್ವಾಮಿಯನ್ನು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ಮಧ್ಯಾಹ್ನ ಕೂಡಲಕುಪ್ಪೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದೇವಾಲಯದ ಹೊರ ಆವರಣದಲ್ಲಿ ದೇಗುಲದ ಆಡಳಿತ ಮಂಡಳಿ ಹಾಗೂ ಗ್ರಾಮದ ಯಜಮಾನರು ಮತ್ತು ಮುಖಂಡರ ನೇತೃತ್ವದಲ್ಲಿ ಅನ್ನಸಂತರ್ಪಣೆ ನಡೆಸಲಾಯಿತು. ಕೂಡಲಕುಪ್ಪೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ಬಲ್ಲೇನಹಳ್ಳಿ, ನೆಲಮನೆ, ಚಿಂದಗಿರಿಕೊಪ್ಪಲು, ಹನುಮಂತನಗರ, ಕಿರಂಗೂರು ಮಾತ್ರವಲ್ಲದೆ ಶ್ರೀರಂಗಪಟ್ಟಣ ಹಾಗೂ ಮಂಡ್ಯ-ಮೈಸೂರಿನಿಂದಲೂ ಭಕ್ತರು ಸಾರ್ವಜನಿಕರು ಆಗಮಿಸಿ ದೇವರ ದರ್ಶನದೊಂದಿಗೆ ಪ್ರಸಾದ ಸ್ವೀಕರಿಸಿದರು.