ಸಂಪಾದಕೀಯ| ಸಂಸ್ಕೃತಿಯ ಹೆಗ್ಗುರುತು

Ram Mandir 2
Published on

ಯಾವುದೇ ರಾಷ್ಟ್ರದ ಆತ್ಮವೆಂದರೆ ಅಲ್ಲಿನ ಸಂಸ್ಕೃತಿ ಮತ್ತು ಶ್ರದ್ಧೆಯ ಮೌಲ್ಯಗಳು. ಭಾರತ ಅದೆಷ್ಟೋ ಘೋರ ಆಕ್ರಮಣಗಳಿಗೆ ತುತ್ತಾದರೂ, ಅದಕ್ಕೆಲ್ಲ ಸಮರ್ಥ ಪ್ರತ್ಯುತ್ತರವನ್ನೇ ನೀಡಿತು. ಪ್ರತಿ ಆಕ್ರಮಣದ ವೇಳೆಗೂ ಇಲ್ಲಿನ ಸಂಸ್ಕೃತಿ, ಶ್ರೇಷ್ಠ ಜೀವನಪದ್ಧತಿಯನ್ನು ನಾಶಮಾಡುವ ಪ್ರಯತ್ನಗಳು ಇನ್ನಿಲ್ಲದಂತೆ ನಡೆದವು. ಆದರೂ, ಸಂಸ್ಕೃತಿಯ ಬೇರುಗಳನ್ನು ಕಿತ್ತೊಗೆಯಲು ಸಾಧ್ಯವಾಗಲಿಲ್ಲ. ಅದರಲ್ಲೂ, ಶ್ರೀರಾಮಚಂದ್ರ ಭರತವರ್ಷದ ರಾಷ್ಟ್ರಪುರುಷ ಎಂದೇ ಆತನ ಆದರ್ಶ, ಮೌಲ್ಯಗಳನ್ನು ಆರಾಧಿಸಿಕೊಂಡು, ಅನುಷ್ಠಾನಿಸಿಕೊಂಡು ಬರಲಾಗುತ್ತಿದೆ. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಪ್ರದೇಶದಲ್ಲಿ ತಲೆ ಎತ್ತಿದ್ದ ವಿವಾದಿತ ಕಟ್ಟಡವೊಂದು ಇತಿಹಾಸಕ್ಕೆ ಅಪಚಾರವೆಸಗಿ, ಮೌಲ್ಯಗಳನ್ನು ಅವಮಾನಿಸುತ್ತಿತ್ತು ಎಂಬುದೇ ಅಧ್ಯಾತ್ಮ ಚಿಂತಕರ ಪ್ರತಿಪಾದನೆ. 500 ವರ್ಷಕ್ಕೂ ಹೆಚ್ಚು ಅವಧಿಯ ಹೋರಾಟ, 3 ಲಕ್ಷಕ್ಕೂ ಅಧಿಕ ಜನರ ಬಲಿದಾನ, ಸಾವಿರಾರು ಜನರ ನಿರಂತರ ಪ್ರಯತ್ನ, ಸುದೀರ್ಘ ಕಾನೂನು ಸಂಘರ್ಷ, ಪುರಾತತ್ತ್ವ ಇಲಾಖೆ ನಡೆಸಿದ ಉತ್ಖನನ-ಹೀಗೆ ಇಷ್ಟೆಲ್ಲ ಪ್ರಬಲ ಪ್ರಯತ್ನಗಳ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರದ ಕನಸು ನನಸಾಗುತ್ತಿದ್ದು, ಅದರ ಆರಂಭಿಕ ಪ್ರಕ್ರಿಯೆಗೆ ಇಂದು (ಬುಧವಾರ) ಚಾಲನೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಮಂದಿರ ಶಿಲಾನ್ಯಾಸ ನೆರವೇರಿಸಲಿದ್ದು, ಈ ಮೂಲಕ ಹಲವು ಶತಮಾನಗಳ ಕನಸೊಂದು ನನಸಾಗಲಿದೆ.

ಇದು ಕೇವಲ ಒಂದು ಮಂದಿರದ ಪ್ರಶ್ನೆಯಲ್ಲ. ಮಂದಿರದಿಂದ ದೇಶ ಅಭಿವೃದ್ಧಿ ಆಗುತ್ತದೆಯೇ ಎಂದು ಕೆಲವರು ಪ್ರಶ್ನಿಸಿಯಾರು. ಸಂಸ್ಕೃತಿಯ ಪುನರುತ್ಥಾನದ ದಿಟ್ಟ ಹೆಜ್ಜೆಯಾಗಿ ಇದು ಸಾಕಾರಗೊಳ್ಳುತ್ತಿದೆ. ನಮ್ಮ ರಾಷ್ಟ್ರಧರ್ಮ, ಜೀವನಧರ್ಮದ ಬೇರುಗಳನ್ನು ಬಲಿಷ್ಠಗೊಳಿಸುವ ಯತ್ನ. ರಾಮನಿಲ್ಲದೆ ಈ ದೇಶವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನ್ಯಾಯ, ನೀತಿ, ಸಹೋದರತ್ವ, ತ್ಯಾಗ, ಪ್ರಾಮಾಣಿಕತೆ, ಕಷ್ಟಸಹಿಷ್ಣುತೆ, ಸರಳತೆ, ಜ್ಞಾನ, ಶೌರ್ಯ, ರಾಜನೀತಿ, ಕೆಡುಕಿನ ವಿರುದ್ಧ ಹೋರಾಟ, ಸಾತ್ವಿಕ ಶಕ್ತಿಗಳಿಗೆ ಬಲ ಹೀಗೆ ಹಲವು ಉತ್ತಮ ಗುಣಗಳಿಂದ ಕೂಡಿದ ಮರ್ಯಾದಾ ಪುರುಷೋತ್ತಮನಾಗಿ ಶ್ರೀರಾಮ ಲೌಕಿಕ-ಅಲೌಕಿಕ ಬದುಕಿಗೆ ಮಾರ್ಗದರ್ಶಕ. ಜನ್ಮಭೂಮಿಯಲ್ಲಿ ಮಂದಿರ ನಿರ್ವಣವಾಗುವುದೆಂದರೆ ಈ ಎಲ್ಲ ಮೌಲ್ಯಗಳ ಮರುಸ್ಥಾಪನೆ. ಮಂದಿರ ಸಾಂಕೇತಿಕವಾದರೂ, ಅದು ಶ್ರೇಷ್ಠ ಸಂಸ್ಕೃತಿಯ ಪ್ರವಾಹವನ್ನು ನೆನಪಿಸಿಕೊಟ್ಟು, ಮುಂದೆ ಸಾಗಬೇಕಾದ ಪಥವನ್ನು ತೋರಿಸುತ್ತದೆ. ಆಧುನಿಕ ಯುಗದ ಹಲವು ತಲ್ಲಣಗಳಿಗೂ ಉತ್ತರ ನೀಡುತ್ತದೆ. ಹಾಗಾಗಿಯೇ, ಶಿಲಾನ್ಯಾಸ ಸಮಾರಂಭವನ್ನು ಇಡೀ ರಾಷ್ಟ್ರ ಉತ್ಸಾಹದಿಂದ ಎದುರು ನೋಡುತ್ತಿದೆ. ಈ ಮೂಲಕ ಲಕ್ಷಾಂತರ ಜನರ ಬಲಿದಾನವೂ ಸಾರ್ಥಕವಾಗಲಿದೆ.

ರಾಷ್ಟ್ರದ ಅಸ್ಮಿತೆಯ ಪ್ರತೀಕವಾಗಿರುವ ಶ್ರೀರಾಮ ಮಂದಿರವು ರಾಮತತ್ತ್ವದ ಸ್ಥಾಪನೆಗೆ ಪ್ರೇರಣೆ ಆಗಬೇಕು. ರಾಜನೀತಿಯಲ್ಲಿ, ಜನಸಾಮಾನ್ಯರ ಬದುಕಿನಲ್ಲಿ ಆ ಶ್ರೇಷ್ಠ ಮೌಲ್ಯಗಳು ಮೇಳೈಸಬೇಕು. ಆಗಲೇ ನಿಜವಾದ ರಾಮರಾಜ್ಯದತ್ತ ಸಾಗಲು ಸಾಧ್ಯ. ಮಂದಿರ ನಿರ್ವಣದ ನಿಮಿತ್ತವಾಗಿ ಅಯೋಧ್ಯೆಯೂ ಸಮಗ್ರವಾಗಿ ಅಭಿವೃದ್ಧಿಗೊಳ್ಳಲಿದ್ದು, ಪೂರಕ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ. ಏನೇ ಆದರೂ, ದೀರ್ಘ ವಿವಾದವೊಂದು ಸುಖಾಂತ್ಯ ಕಂಡು, ಮಂದಿರದ ಕೆಲಸ ಶುರು ವಾಗುತ್ತಿರುವುದು ಸಾಂಸ್ಕೃತಿಕ ರಾಷ್ಟ್ರೀಯತೆಯ ಶಕ್ತಿ ಎಂಬುದನ್ನು ಮರೆಯುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net