

| ಅರವಿಂದ ಅಕ್ಲಾಪುರ ಶಿವಮೊಗ್ಗ
ಎರಡು ವರ್ಷಗಳಿಂದ ಕರೊನಾ ಕಾರಣಕ್ಕೆ ಶಿಕ್ಷಣ ವ್ಯವಸ್ಥೆ ಮೇಲೆ ಬಹಳಷ್ಟು ವ್ಯತಿರಿಕ್ತ ಪರಿಣಾಮಗಳು ಉಂಟಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಪರ್ಯಾಯ ಸಾಧ್ಯತೆಗಳ ಮೂಲಕ ಶಿಕ್ಷಣವನ್ನು ಸರಿ ದಿಕ್ಕಿನಲ್ಲಿ ಕೊಂಡೊಯ್ಯಬೇಕಾದ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದಲ್ಲಿ ಆ ಚಿಂತನೆಗಳೇ ನಡೆದಿಲ್ಲ.
ಹೌದು, ಮೂರ್ನಾಲ್ಕು ಬಾರಿ ಪರೀಕ್ಷೆಗೆಂದು ಅಧಿಸೂಚನೆ ಹೊರಡಿಸಿದ್ದು ಮತ್ತು ಕರೊನಾ ಕಾರಣದಿಂದ ಅದನ್ನು ಮುಂದೂಡಿದ್ದನ್ನು ಬಿಟ್ಟರೆ ಕುವೆಂಪು ವಿವಿ ದೂರಶಿಕ್ಷಣ ವಿಭಾಗದಲ್ಲಿ ಪರೀಕ್ಷೆ ನಡೆಸುವ ಸಂಬಂಧ ರಚನಾತ್ಮಕ ಚಿಂತನೆಗಳು ನಡೆಯದಿರುವುದು ದೂರ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗೆ ಆತಂಕ ಉಂಟುಮಾಡಿದೆ.
2019-20ನೇ ಸಾಲಿನಲ್ಲಿ ದೂರಶಿಕ್ಷಣ ವಿಭಾಗದಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಕರೊನಾ ಕಾರಣದಿಂದ ಇದುವರೆಗೂ ಪರೀಕ್ಷೆ ನಡೆಸಿಲ್ಲ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಫಲಿತಾಂಶ ಪಡೆದು ಉದ್ಯೋಗದ ಮಾರ್ಗ ಹುಡುಕಿಕೊಳ್ಳಬೇಕಿತ್ತು. ಆದರೆ ಪರೀಕ್ಷೆ ನಡೆಸಲು ದೂರ ಶಿಕ್ಷಣ ನಿರ್ದೇಶನಾಲಯ ಮೀನಮೇಷ ಎಣಿಸುತ್ತಿದೆ.
10 ಸಾವಿರ ವಿದ್ಯಾರ್ಥಿಗಳು: ಕುವೆಂಪು ವಿವಿಯ ವಿವಿಧ ದೂರ ಶಿಕ್ಷಣ ಅಧ್ಯಯನ ಕೇಂದ್ರಗಳಲ್ಲಿ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. 2019-20ನೇ ಸಾಲಿನಲ್ಲಿ ಪ್ರವೇಶ ಪಡೆದವರಿಗೆ ಇದುವರೆಗೆ ಎರಡು ಬಾರಿ ಪರೀಕ್ಷೆ ವೇಳಾಪಟ್ಟಿ ಘೋಷಿಸಿ ಬಳಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಎರಡು ವರ್ಷ ಮಾರ್ಚ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಪರೀಕ್ಷೆ ನಡೆಸಿರಲಿಲ್ಲ. ಆದರೆ ಈಗಾಗಲೇ ಕಾಲೇಜುಗಳು ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿವೆ. ಆದರೂ ದೂರ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ವಿವಿ ಮುಂದಾಗುತ್ತಿಲ್ಲ. ಈ ವೇಳೆಗಾಗಲೇ ಎರಡು ವರ್ಷದ ಸ್ನಾತಕೋತ್ತರ ಪದವಿ ಪೂರೈಸಬೇಕಿದ್ದ ವಿದ್ಯಾರ್ಥಿಗಳು ಇನ್ನೂ ಒಂದು ವರ್ಷವನ್ನು ಕೂಡ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಪರೀಕ್ಷೆಯಿಲ್ಲ-ಬಡ್ತಿಯೂ ಇಲ್ಲ!: ಕರೊನಾ ಕಾರಣದಿಂದ ಪರೀಕ್ಷೆ ನಡೆಸಲು ಸಾಧ್ಯವಾಗದಿದ್ದ ಸಂದರ್ಭ ವಿವಿಧ ಪದವಿ ಕೋರ್ಸ್ಗಳ ಪ್ರಥಮ, ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬಡ್ತಿ ನೀಡಿದ ನಿದರ್ಶನಗಳಿವೆ. ಆದರೆ ಕುವೆಂಪು ವಿವಿ ದೂರ ಶಿಕ್ಷಣ ವಿದ್ಯಾರ್ಥಿಗಳಿಗೆ ಬಡ್ತಿಯೂ ಇಲ್ಲ, ಪರೀಕ್ಷೆಯನ್ನೂ ನಡೆಸಲ್ಲ ಎಂಬ ನಿರ್ಧಾರಕ್ಕೆ ವಿವಿ ಆಡಳಿತ ಮಂಡಳಿ ಬಂದಂತಿದೆ.
ತೆರೆದ ಪುಸ್ತಕ ಪರೀಕ್ಷೆ: ಇಷ್ಟೆಲ್ಲ ಗೊಂದಲಗಳ ನಡುವೆ ದೂರಶಿಕ್ಷಣ ವಿಭಾಗದಿಂದ ಮೈಸೂರು ಮುಕ್ತ ವಿವಿ ಮಾದರಿಯಲ್ಲೇ ತೆರೆದ ಪುಸ್ತಕ ಪದ್ಧತಿಯಲ್ಲಿ ಪರೀಕ್ಷೆ ನಡೆಸಲು ತೀರ್ವನಿಸಲಾಗಿತ್ತು. 2019-20ನೇ ಸಾಲಿನಲ್ಲಿ ಪ್ರವೇಶ ಪಡೆದ ಪ್ರಥಮ ಹಾಗೂ ದ್ವಿತೀಯ ವರ್ಷದ ಸ್ನಾತಕ ವಿದ್ಯಾರ್ಥಿಗಳಿಗೆ ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 2021ರ ಜೂ.14ರಿಂದ 10 ದಿನಗಳ ಕಾಲ ತೆರೆದ ಪುಸ್ತಕ ಪದ್ಧತಿಯಲ್ಲಿ ಪರೀಕ್ಷೆ ಆಯೋಜಿಸಲು ನಿರ್ಧರಿಸಲಾಗಿತ್ತು. ಈ ಸಂಬಂಧ ಎಲ್ಲ ದೂರ ಶಿಕ್ಷಣ ಸಂಯೋಜನಾಧಿಕಾರಿಗಳಿಗೆ ಅಧಿಸೂಚನೆಯನ್ನೂ ಕಳುಹಿಸಲಾಗಿತ್ತು. ಈ ಸಂಬಂಧ ವಿದ್ಯಾರ್ಥಿಗಳಿಗೆ ವಿಷಯ ತಲುಪುವುದರೊಳಗೆ ತೆರೆದ ಪುಸ್ತಕ ಪರೀಕ್ಷೆ ಮುಂದೂಡಲ್ಪಟ್ಟಿತ್ತು.
ಏನಾದರೊಂದು ಮಾಡಿ ಪ್ಲೀಸ್: ದೂರಶಿಕ್ಷಣ ವಿಭಾಗದ ಪರೀಕ್ಷೆ ನಡೆಸುವುದಕ್ಕೆ ವಿವಿ ಮೀನಮೇಷ ಎಣಿಸುತ್ತಿರುವುದಕ್ಕೆ ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ನಡೆಸದೆ ಬಡ್ತಿ ನೀಡಿ ಎಂಬುದು ನಮ್ಮ ಒತ್ತಾಯವಲ್ಲ. ಇಷ್ಟು ದಿನ ಕರೊನಾ ಕಾರಣದಿಂದ ಪರೀಕ್ಷೆ ನಡೆಸಲಿಲ್ಲ. ಆದರೆ ಈಗ ಎಲ್ಲವೂ ಹಳಿಗೆ ಮರಳಿದೆ. ಪ್ರತಿದಿನ ಶಾಲಾ ಕಾಲೇಜು ನಡೆಸುತ್ತಿರುವ ಸಂದರ್ಭದಲ್ಲಿ ನಮಗೆ ಪರೀಕ್ಷೆ ನಡೆಸಲೇನು ಅಡ್ಡಿ. ಮೈಸೂರು ಮುಕ್ತ ವಿವಿ ತೆರೆದ ಪುಸ್ತಕ ಪದ್ಧತಿಯಲ್ಲಿ ಪರೀಕ್ಷೆ ನಡೆಸಿ ಯಶಸ್ವಿಯಾಗಿರುವಾಗ ಇಲ್ಲಿಯೂ ಅದೇ ಮಾದರಿ ಅನುಸರಿಸಬಹುದು ಎಂದು ದೂರಶಿಕ್ಷಣ ವಿಭಾಗದ ಅನೇಕ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಸರ್ಕಾರ ಉಪನ್ಯಾಸಕ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ದೂರಶಿಕ್ಷಣ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ನಮಗೆ ಸರಿಯಾದ ಸಮಯದಲ್ಲಿ ಪರೀಕ್ಷೆ ನಡೆಸುವುದೋ ಅಥವಾ ಬಡ್ತಿ ನೀಡುವುದೋ ಮಾಡಿದ್ದರೆ ಉಪನ್ಯಾಸಕರ ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ವಿವಿ ವಿಳಂಬ ನೀತಿಯಿಂದ ನಮ್ಮ ಸಮಯ ವ್ಯಯವಾಗುತ್ತಿದೆ.
| ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿ ಚಳ್ಳಕೆರೆ
ಕರೊನಾ ಕಾರಣದಿಂದ ದೂರಶಿಕ್ಷಣ ವಿಭಾಗದ ಪರೀಕ್ಷೆಗಳು ವಿಳಂಬವಾಗಿವೆ. ಈ ಸಂಬಂಧ ಯುಜಿಸಿಗೆ ಪತ್ರ ಬರೆದು ನಿರ್ದೇಶನ ಕೋರಿದ್ದೇವೆ. ಬಹುಶಃ ಇನ್ನೊಂದು ವಾರದಲ್ಲಿ ಅಲ್ಲಿಂದ ಸ್ಪಷ್ಟ ಸೂಚನೆ ಬಂದ ಬಳಿಕ ಅದರಂತೆ ಕ್ರಮ ಕೈಗೊಳ್ಳುತ್ತೇವೆ. ಈ ತಿಂಗಳ ಅಂತ್ಯದೊಳಗೆ ಫಲಿತಾಂಶ ನೀಡುವ ಪ್ರಯತ್ನ ಮಾಡುತ್ತೇವೆ.
|ಪ್ರೊ. ಸಿ.ಎಂ.ತ್ಯಾಗರಾಜ ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ