ಸಾರಿಗೆ ಸಿಬ್ಬಂದಿ ಹಿತರಕ್ಷಣೆಗೆ ಬದ್ಧ ಎನ್ನುತ್ತಾ ಹಲವು ವಿಷಯ ಪ್ರಸ್ತಾಪಿಸಿದ ಸಚಿವ ಶ್ರೀರಾಮುಲು

05122020 B Sriramulu
Published on

ಬೆಂಗಳೂರು: ಮುಷ್ಕರದಲ್ಲಿ ಭಾಗಿಯಾಗಿದ್ದ ಸಾರಿಗೆ ಸಿಬ್ಬಂದಿ ಅಮಾನತು ಮತ್ತು ವರ್ಗಾವಣೆ ಆದೇಶ ವಾಪಸ್ ಪಡೆಯಲಾಗಿದೆ. ವಜಾಗೊಂಡವರ ಪ್ರಕರಣವು ಕಾರ್ವಿುಕ ಕೋರ್ಟ್​ನಲ್ಲಿದ್ದು, ತಾಂತ್ರಿಕ ಅಡಚಣೆ ನಿವಾರಿಸಿದ ನಂತರ ವಜಾ ರದ್ದಾಗಲಿದೆ. ಸಿಬ್ಬಂದಿ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದ ಸಚಿವ ಶ್ರೀರಾಮುಲು, ಸಿಬ್ಬಂದಿ ಮೇಲಿನ ಕಿರುಕುಳವನ್ನ ಯಾವುದೇ ಕಾರಣಕ್ಕೂ ಸಹಿಸಲ್ಲ. ತಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ವೇತನ ಸಮಸ್ಯೆಯಿಂದ ಕಿಡ್ನಿ ಮಾರಾಟದ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ನೌಕರ ಹಂಚಿಕೊಂಡಿದ್ದರ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯನಗರ ಜಿಲ್ಲೆ ಹೊಸಪೇಟೆ ಡಿಪೋದ ಚಾಲಕನಿಗೆ ಕಿರುಕುಳ ನೀಡಿದ ದೂರು ಗಂಭೀರವಾಗಿ ಪರಿಗಣಿಸಿದ್ದು, ವಿಭಾಗೀಯ ನಿಯಂತ್ರಣಾಧಿಕಾರಿಗೆ ಸಮಜಾಯಿಷಿ ಕೇಳಿ ನೋಟಿಸ್ ನೀಡಲಾಗಿದೆ. ತಪ್ಪು ರುಜುವಾತಾದರೆ ಸಂಬಂಧಿಸಿದವರ ವಿರುದ್ಧ ಕ್ರಮ ವಹಿಸಲಾಗುವುದು. ಪ್ರಯಾಣಿಕರಿಗೆ ಸೇವೆ ಮತ್ತು ಸಂಸ್ಥೆ ಹಿತದೃಷ್ಟಿಯಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಸ್ಪರ ವಿಶ್ವಾಸ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವುದು ಸೂಕ್ತವೆಂಬ ಸಲಹೆ ನೀಡಲಾಗಿದೆ ಎಂದು ಶ್ರೀರಾಮುಲು ಹೇಳಿದರು.

ಸಿಬ್ಬಂದಿ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಸಿಬ್ಬಂದಿ ವೇತನ ಪಾವತಿಸಲೆಂದು ಈವರೆಗೆ 2,500 ಕೋಟಿ ರೂ. ಅನುದಾನವನ್ನು ಸಾರಿಗೆ ನಿಗಮಗಳಿಗೆ ನೀಡಿದೆ. ಕಳೆದ ವೇತನ ನೀಡಲೆಂದು 171 ಕೋಟಿ ರೂ. ಬಿಡುಗಡೆ ಮಾಡಿದ್ದು, ಅ.8ರಂದು ತಲಾ ಅರ್ಧ ಸಂಬಳ ಪಾವತಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net