ವಾಂತಿ ಮಾಡಲು ಹೋದ ಮಹಿಳೆ ಬಸ್​ನಿಂದ ಬಿದ್ದು ಸಾವು! ಕಗ್ಗತ್ತಲಿನ ಕಾಡಲ್ಲಿ 8 ಕಿ.ಮೀ ದೂರ ಶವ ಹೊತ್ತ ಗ್ರಾಮಸ್ಥರು

death
Published on

ಚಾಮರಾಜನಗರ: ಕೆಎಸ್​ಆರ್​ಟಿಸಿ ಬಸ್ಸಿನ ಬಾಗಿಲು ಬಳಿ ನಿಂತು ವಾಂತಿ ಮಾಡಲು ಹೋದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಸಂಭವಿಸಿದೆ. ದುರಂತ ಸಾವು ಕಂಡ‌ ಮಹಿಳೆಯ ಮೃತದೇಹವನ್ನು ಜೋಲಿ‌ಕಟ್ಟಿ ಕಟ್ಟಿಕೊಂಡು ಗ್ರಾಮಸ್ಥರು ತಡರಾತ್ರಿ ಕಾಡಿನ ದಾರಿಯಲ್ಲಿ ಸುಮಾರು 8 ಕಿ.ಮೀ ದೂರ ಹೊತ್ತುಕೊಂಡೇ ಸಾಗಬೇಕಾಯಿತು...

ಬೆಟ್ಟದ ಹಳೆಯೂರು ಗ್ರಾಮದ ನಿವಾಸಿ ಕುಳ್ಳಮಾದಿ (50) ಮೃತಪಟ್ಟ ದುರ್ದೈವಿ. ಸಂಬಂಧಿಕರ ಮನೆಗೆ ಬಂದಿದ್ದ ಕುಳ್ಳಮಾದಿ ಅವರು ಮಹದೇಶ್ವರ ಬೆಟ್ಟದಿಂದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಗುರುವಾರ ಸಂಜೆ 4.30ಕ್ಕೆ ವಡಕೆಹಳ್ಳಕ್ಕೆ ಹೊರಟಿದ್ದರು. ಈ ಬಸ್​ ಮೈಸೂರು ಹಾಗೂ ಕೆ.ಆರ್. ಪೇಟೆ ಮಾರ್ಗದತ್ತ ಹೊರಟಿತ್ತು. ಬಸ್​ ಸಂಚರಿಸುತ್ತಿರುವಾಗಲೇ ವಾಂತಿ ಬರುತ್ತಿದೆ ಎಂದು ಬಸ್​ನ ಬಾಗಿಲ ಬಳಿ ಹೋಗಿದ್ದಾಳೆ. ಬೆಟ್ಟದ ಶನೇಶ್ವರಸ್ವಾಮಿ ದೇವಸ್ಥಾನದ ತಿರುವಿನಲ್ಲಿ ಬಸ್​ನಿಂದ ಕೆಳಗೆ ಬಿದ್ದ ಕುಳ್ಳಮಾದಿ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಕೊನೆಯುಸಿರೆಳೆದರು.

ಬಳಿಕ ಬಸ್ ಚಾಲಕ ಹರೀಶದ, ಕಂಡಕ್ಟರ್‌ ಬೀರಾದರ್ ಹಾಗೂ ಪ್ರಯಾಣಿಕರು ಸೇರಿ ಅದೇ ವಾಹನದಲ್ಲಿ ಮೃತ ದೇಹವನ್ನು ಮಹದೇಶ್ವರಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಮಹದೇಶ್ವರ ಬೆಟ್ಟದ ಠಾಣೆಯಲ್ಲಿ ಮೃತರ ಸಂಬಂಧಿ ಕೆಂಪಮಾದಮ್ಮ ಅವರು ಚಾಲಕ ಮತ್ತು ನಿರ್ವಾಹಕನ ವಿರುದ್ಧ ದೂರು ಸಲ್ಲಿಸಿದ್ದಾರೆ.

ಮರಣೋತ್ತ ಪರೀಕ್ಷೆ ನಡೆಸಿದ ನಂತರ ಕುಟಂಬಸ್ಥರಿಗೆ ಶವ ಹಸ್ತಾಂತರಿಸಲಾಯಿತು. ಇತ್ತ ಶವ ರವಾನಿಸಲು ಆಂಬುಲೆನ್ಸ್​ ಕೂಡ ಬರಲಿಲ್ಲ. ಮೃತದೇಹವನ್ನು ಶವಪರೀಕ್ಷೆ ನಡೆಸಿ ರಾತ್ರಿ ತಡವಾಗಿ ನೀಡಲಾಗಿದೆ. ಕಾಂಡಚಿನ ಭಾಗದಲ್ಲಿ ಇರುವ ಹಳೇಯೂರು ಗ್ರಾಮಕ್ಕೆ ಕೊಂಡು ಹೋಗಲು, ಮೃತನ ಸಂಬಂಧಿಕರಾದ ಕುಮಾರ್ ರವರು 108ಗೆ ಕರೆ ಮಾಡಿ ಕೇಳಿದಾಗ ಸೇವೆ ವಾಹನ ಲಭ್ಯವಾಗಿಲ್ಲ. ಪ್ರಾಥಮಿಕ ಆರೋಗ್ಯ ತುರ್ತುವಾಹನ ಇದ್ದರೂ‌ ಚಾಲಕನಿಲ್ಲದೆ ಉಪಯೋಗಕ್ಕೆ ಬಂದಿಲ್ಲ. ಕೊನೆಗೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಮೃತದೇಹವನ್ನು ಬಟ್ಟೆಯ ನೆನೆಯಲ್ಲಿ ಜೋಕಲಿ ಕಟ್ಟಿಕೊಂಡು ಹೆಗಲ ಮೇಲೆ ಹೋತ್ತು ರಾತ್ರಿ ಸುಮಾರು 8 ಕಿ.ಮೀ ಸಾಗಿ ಗ್ರಾಮ ತಲುಪಿದರು.

ಮಲೆಮಹದೇಶ್ವರ ಬೆಟ್ಟದ ಪ್ರಾಥಮಿಕ‌ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್​ ಇದ್ದರೂ ಸೇವೆ ಲಭ್ಯವಿಲ್ಲ ಎನ್ನುವ ಮೂಲಕ ಅಲ್ಲಿನ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net