ರಾಜೀನಾಮೆ‌ ನೀಡದಂತೆ ಈಶ್ವರಪ್ಪ ಎದುರು ಕಣ್ಣೀರಿಟ್ಟ ಬಿಜೆಪಿ ಕಾರ್ಯಕರ್ತೆಯರು!

eshwarappa
Published on

ಶಿವಮೊಗ್ಗ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಶುಕ್ರವಾರ ಬೆಂಗಳೂರಿಗೆ ತೆರಳುವ ಮುನ್ನ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲು ಕೆ.ಎಸ್​.ಈಶ್ವರಪ್ಪ ಬರುತ್ತಿದ್ದಂತೆ ಅವರನ್ನು ಸುತ್ತುವರಿದ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಯಾವುದೇ ಕಾರಣಕ್ಕೂ ರಾಜೀನಾಮೆ‌ ನೀಡದಂತೆ ಈಶ್ವರಪ್ಪ ಎದುರು ಕಣ್ಣೀರು ಹಾಕಿದರು.

ಆ ವೇಳೆ ಮಹಿಳಾ ಕಾರ್ಯಕರ್ತರನ್ನು ಸಂತೈಸಲು ಮುಂದಾದ ಈಶ್ವರಪ್ಪ, ನೀವು ಹೀಗೆ ಅಳುತ್ತಿದ್ದರೆ ನಾನು ಇಲ್ಲಿಂದ ಹೋಗುವುದೇ ಇಲ್ಲ. ಸಂತೋಷದಿಂದ ಕಳಿಸಿಕೊಡಿ ಎಂದು ಮನವಿ ಮಾಡಿದರು. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ನಾಳೆ ಮತ್ತೆ ಬರುತ್ತೇನೆ ಎಂದು ಸಮಾಧಾನ ಪಡಿಸಿದರು.

ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ವ್ಯಕ್ತಿಗಳಿಗೆ ತಾತ್ಕಾಲಿಕವಾಗಿ ಯಶಸ್ಸು ಸಿಕ್ಕಿರಬಹುದು. ಆದರೆ ನನ್ನನ್ನು ಇಷ್ಟು ವರ್ಷ ಬೆಳೆಸಿದ ಸಂಘಟನೆ, ಸಂಘದ ಪ್ರಮುಖರು, ಕಾರ್ಯಕರ್ತರಿಗೆ ಮೇಲ್ಪಂಕ್ತಿಯಾಗಲಿ ಎಂಬ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನೀವು ಅಳುತ್ತಾ ನನ್ನನ್ನು ಕಳಿಸಿಕೊಡಬೇಡಿ ಎಂದು ಮನವಿ ಮಾಡಿದರು.

ತಪ್ಪಾಗಿದ್ದರೆ ನನಗೆ ಶಿಕ್ಷೆಯಾಗಲಿ. ನನ್ನ ಮನೆದೇವರು ಚೌಡೇಶ್ವರಿ ಹಾಗೂ ಮಲ್ಲೇಶ್ವರನಿಗೆ ನಿಷ್ಟೆಯಿಂದ ಪೂಜೆ ಮಾಡುತ್ತೇನೆ‌. ನಾನು ಆರೋಪದಿಂದ ಮುಕ್ತನಾಗಿ ಬರುತ್ತೇನೆ. ಸಿಎಂ ಬಸವರಾಜ ಬೊಮ್ಮಾಯಿ ತನಿಖೆಗೆ ಆದೇಶ ನೀಡಿದ್ದಾರೆ. ಎರಡು ದಿನ ರಾಜೀನಾಮೆ ನೀಡಬೇಡಿ ಎಂದು ಪಕ್ಷದ ಪ್ರಮುಖರು ಹೇಳಿದ್ದರು. ಅದಕ್ಕೆ ತಡ ಮಾಡಿದೆ. ನೀವು ಅಳುತ್ತಾ ನನ್ನನ್ನು ಕಳಿಸಿಕೊಡಬೇಡಿ ಎಂದು ಈಶ್ವರಪ್ಪ ಮನವಿ ಮಾಡಿದರು.

ಈ ಸಂಘಟನೆಗೆ ಬಂದು ಸೇರಿಕೊಂಡಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ಇದೊಂದು ಅಗ್ನಿಪರೀಕ್ಷೆ. ಇದರಲ್ಲಿ ಯಶಸ್ವಿಯಾಗಿ ಹೊರಬರುತ್ತೇನೆ. ಜೀವ ಇರುವವರೆಗೂ ದೇಶದ ಸೇವೆಯಲ್ಲಿ ತೊಡಗುತ್ತೇನೆ ಎಂದು ಈಶ್ವರಪ್ಪ ಶಪಥ ಮಾಡಿದರು. ಈ ಹಿಂದೆ ಪಕ್ಷದ‌ ಮುಖಂಡರು ಪಕ್ಷದ ಅಧ್ಯಕ್ಷನಾಗುವಂತೆ ಹೇಳಿದಾಗ ನಾನು ಸಚಿವ ಸ್ಥಾನ ತ್ಯಜಿಸಿ ಅಧ್ಯಕ್ಷನಾಗಿದ್ದೆ. ಇದೀಗ ನನ್ನ ಮೇಲೆ ಆರೋಪ‌ ಬಂದಿದೆ. ಹಾಗಾಗಿ ರಾಜೀನಾಮೆ ನೀಡುತ್ತೇನೆ. ಇವತ್ತು ರಾಜ್ಯಾದ್ಯಂತ ನನಗೆ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಗಮನಿಸಿದರೆ ನಾನು ಎಷ್ಟೊಂದು ಜನರಿಗೆ ಪ್ರೀತಿ ಪಾತ್ರನಾಗಿದ್ದೇನೆ ಎಂಬ ಸಂತೃಪ್ತ ಭಾವ ಉಂಟಾಗುತ್ತಿದೆ. ನೀವು ಅಳುತ್ತಾ ನನ್ನನ್ನು ಕಳಿಸಿಕೊಡಬೇಡಿ ಎಂದು ಭಾವುಕರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net