ಕೊಪ್ಪಳ ನಗರಸಭೆ ಕಂದಾಯ ಅಧಿಕಾರಿ ಆತ್ಮಹತ್ಯೆ: ಸಾವಿನ ಹಿಂದಿದ್ಯಾ ಆ ಆರೋಪ?

New Project (31)
Published on

ಕೊಪ್ಪಳ: ನಗರಸಭೆ ಕಂದಾಯ ಅಧಿಕಾರಿ ಶ್ರೀಧರ್ ಅಂಗಡಿ(52) ತನ್ನ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೊಪ್ಪಳ ನಗರದ ಬಸವನಗರದ ಮನೆಯಲ್ಲಿ ಗುರುವಾರ ಬೆಳಗ್ಗೆ ಶ್ರೀಧರ್ ನೇಣುಬಿಗಿದುಕೊಂಡಿದ್ದು, ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕೊಪ್ಪಳ ನಗರ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಲು ಕುಟುಂಬಸ್ಥರು ಹಿಂದೇಟು ಹಾಕಿದ್ದಾರೆ.

ಕಳೆದ ಎರಡ್ಮೂರು ವರ್ಷದಲ್ಲಿ ನಗರಸಭೆಯ ಇಬ್ಬರು ಮಹಿಳಾ ಅಧಿಕಾರಿಗಳು ಸೇರಿ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗಷ್ಟೇ ನಗರಸಭೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಎರಡು ದಿನ ದಾಖಲೆ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಆರ್​ಟಿಐ ಕಾರ್ಯಕರ್ತರು ವಿನಾ ಕಾರಣ ತೊಂದರೆ ನೀಡುತ್ತಾರೆಂದು ಆರೋಪಿಸಿ ನಗರಸಭೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಫಾರ್ಮ್​ 3 ವಿತರಣೆ ಸೇರಿ ಇತರ ವಿಚಾರವಾಗಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಆಗಾಗ ಕೇಳಿ ಬರುತ್ತಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net