

ಚಾಮರಾಜನಗರ: ಇಲ್ಲೊಬ್ಬ ಭೂಪ ಇಬ್ಬರು ಯುವತಿಯರನ್ನ ಪ್ರೀತಿ ಬಲೆಗೆ ಬೀಳಿಸಿಕೊಂಡಿದ್ದು, ಇದನ್ನು ಪ್ರಶ್ನಿಸಿದ ಪ್ರೇಯಸಿಯರ ಪೋಷಕರಿಗೆ ಶಾಕಿಂಗ್ ಉತ್ತರ ಕೊಟ್ಟಿದ್ದಲ್ಲದೆ, ಒಬ್ಬಳ ಸಾವಿಗೂ ಕಾರಣವಾಗಿದ್ದಾನೆ.
ಕೊಳ್ಳೇಗಾಲ ತಾಲೂಕಿನ ಆಂಜನೇಯಪುರ ಗ್ರಾಮದ ಸಿದ್ದಪ್ಪಸ್ವಾಮಿ ಅಲಿಯಾಸ್ ಉಪೇಂದ್ರ ಇಬ್ಬರೊಂದಿಗೆ ಪ್ರೀತಿ ಮಾಡುತ್ತಿದ್ದ ಭೂಪ. ಇದೇ ಗ್ರಾಮದ ಇಬ್ಬರು ಯುವತಿಯರನ್ನ ಪ್ರೀತಿಸುತ್ತಿದ್ದ. ಬೆಂಗಳೂರಿನಲ್ಲಿ ನರ್ಸಿಂಗ್ ಓದುತ್ತಿದ್ದ ನಂಜಮ್ಮಣಿ(21) ಈತನ ಪ್ರೀತಿ ಬಲೆಗೆ ಬಿದ್ದಿದ್ದಳು.
ಆದರೆ ನಂಜಮ್ಮಣಿಗೆ ಗೊತ್ತಾಗದಂತೆ ಆಂಜನೇಯಪುರದಲ್ಲಿ ಮತ್ತೊಬ್ಬ ಪ್ರೇಯಸಿ ಜತೆಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. 20 ದಿನದ ಹಿಂದೆ ನಂಜಮಣಿ ಗ್ರಾಮಕ್ಕೆ ಬಂದಾಗ ವಿಷಯ ಗೊತ್ತಾಗಿದೆ. ಸಿದ್ದಪ್ಪಸ್ವಾಮಿ ನನ್ನನ್ನು ಪ್ರೀತಿಸುತ್ತಿದ್ದ ಎಂದು ಅದಕ್ಕೆ ಸಾಕ್ಷೀಕರಿಸುವ ಫೋಟೋವನ್ನು ನಂಜಮ್ಮಣಿ ತನ್ನ ಮನೆಯಲ್ಲಿ ತೋರಿಸಿದ್ದಾಳೆ. ಈ ಬಗ್ಗೆ ಮಗಳ ಪ್ರಿಯಕರನ್ನು ಆಕೆಯ ಪಾಲಕರು ಪ್ರಶ್ನಿಸಿದ್ದು, ಇಬ್ಬರನ್ನೂ ಮದುವೆ ಆಗುತ್ತೇನೆ. ಯಾರಿಗೂ ಮೋಸ ಮಾಡುವುದಿಲ್ಲ ಎಂದಿದ್ದಾನೆ. ಇದಕ್ಕೆ ಯುವತಿಯ ಪಾಲಕರು ಒಪ್ಪಿಲ್ಲ.
ಇದಾದ ಬಳಿಕ ನಂಜಮ್ಮಣಿಗೆ ಕರೆ ಮಾಡಿದ ಸಿದ್ದಪ್ಪಸ್ವಾಮಿ, ನಿಮ್ಮ ಮನೆಯಲ್ಲಿ ತೊಂದರೆ ಕೊಡುತ್ತಿದ್ದಾರೆ. ಇಬ್ಬರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿನಲ್ಲಿ ಒಂದಾಗೋಣ ಎಂದು ಕರೆದಿದ್ದಾನೆ. ಪ್ರಿಯಕರ ಹೇಳುತ್ತಿರುವುದು ನಿಜವೆಂದು ನಂಬಿ ನಂಜಮ್ಮಣಿ ಬಂದಿದ್ದು, ಇಬ್ಬರು ಒಟ್ಟಿಗೆ ನೇಣು ಹಾಕಿಕೊಂಡಿದ್ದಾರೆ, ಇತ್ತ ನೇಣು ಹಾಕಿಕೊಳ್ಳುವ ಹಾಗೆ ಸಿದ್ದಪ್ಪಸ್ವಾಮಿ ನಾಟಕ ಮಾಡಿದ್ದು, ಪ್ರೇಯಸಿ ನಿಜವಾಗಿಯೂ ನೇಣಿಗೆ ಕೊರಳೊಡ್ಡಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.