ಮನೆ ಬಿಟ್ಟು ಪರಾರಿಯಾಗಿದ್ದ ಪ್ರೇಮಿಗಳು ಬಂಗಾರು ತಿರುಪತಿಯಲ್ಲಿ ಮದ್ವೆಯಾದ್ರು! ಪ್ಲೀಸ್​ ನಮ್ಮನ್ನು ರಕ್ಷಿಸಿ...

lovers
Published on

ಬೇತಮಂಗಲ: ವಾರದ ಹಿಂದೆ ಮನೆಯಿಂದ ಪರಾರಿಯಾಗಿದ್ದ ಪ್ರೇಮಿಗಳು ಕೋಲಾರ ಜಿಲ್ಲೆಯ ಬೇತಮಂಗಲ ಸಮೀಪದ ಬಂಗಾರು ತಿರುಪತಿ ದೇಗುಲದಲ್ಲಿ ಮದುವೆಯಾಗಿದ್ದಾರೆ.

ಮಾಲೂರು ನಗರದ ಸುರೇಶ ಮತ್ತು ಹೊಸಕೋಟೆ ತಾಲೂಕಿನ ಅವಲಹಳ್ಳಿಯ ರಶ್ಮಿ ಪರಸ್ಪರ ಪ್ರೀತಿಸಿದ್ದು, ಎರಡೂ ಕುಟುಂಬದವರ ವಿರೋಧದ ಮಧ್ಯೆ ಕಳೆದ ವಾರ ಯಾರಿಗೂ ತಿಳಿಯದಂತೆ ಪರಾರಿಯಾಗಿದ್ದರು. ಒಂದು ವಾರದಿಂದ ಸ್ನೇಹಿತರು ಮತ್ತು ಇತರೆಡೆ ಕಾಲ ಕಳೆದು ಬಂಗಾರು ತಿರುಪತಿಯಲ್ಲಿ ಶುಕ್ರವಾರ ಮದುವೆಯಾಗಿದ್ದಾರೆ.

ಸಂಘಟನೆ ಮುಖಂಡರೊಬ್ಬರ ಸಹಾಯದಿಂದ ಬೇತಮಂಗಲ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದಿದ್ದ ಪ್ರೇಮಿಗಳು ನಾವಿಬ್ಬರೂ ಪ್ರಾಪ್ತರಾಗಿದ್ದು, ಇಷ್ಟಪಟ್ಟು ಮದುವೆಯಾಗಿದ್ದೇವೆ. ಆದರೆ ತಮಗೆ ಎರಡೂ ಕುಟುಂಬಗಳಿಂದ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ಕೋರಿದ್ದಾರೆ.

ಈ ಬಗ್ಗೆ ಹೇಳಿಕೆ ಪಡೆದುಕೊಂಡ ಸಾಂತ್ವನ ಕೇಂದ್ರದ ಕಾರ್ಯದರ್ಶಿ ಡಾ.ಗೋಪಾಲ್​ ಮತ್ತು ಆಪ್ತ ಸಮಾಲೋಚಕಿ ಪವಿತ್ರಾ ಅವರು ಪ್ರೇಮಿಗಳಿಬ್ಬರ ಜನ್ಮದಿನಾಂಕದ ಪ್ರಮಾಣಪತ್ರ ನೀಡುವಂತೆ ಸೂಚಿಸಿದ್ದು, ಇಬ್ಬರೂ ವಯಸ್ಕರಾಗಿದ್ದರೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಯುವತಿ ಮನೆಯವರು ಅವಲಹಳ್ಳಿ ಪೊಲೀಸ್​ ಠಾಣೆಯಲ್ಲಿ ರಶ್ಮಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಜಾತಿ ಬೇರೆಯಾಗಿರುವುದು ಕುಟುಂಬಗಳ ವಿರೋಧಕ್ಕೆ ಕಾರಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net