ಒಪಿಎಸ್ ಕನ್ನಡಿಯಲ್ಲಿನ ಗಂಟು?; ನೌಕರರಿಗೆ ಕೈಕೊಟ್ಟಿತೇ ಸರ್ಕಾರ?

Vidhanasoudha
Published on

ಕೀರ್ತಿನಾರಾಯಣ ಸಿ. ಬೆಂಗಳೂರು
ಸರ್ಕಾರಿ ನೌಕರರನ್ನು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್​ಪಿಎಸ್) ವ್ಯಾಪ್ತಿಯಿಂದ ಹಳೇ ಪಿಂಚಣಿ ಯೋಜನೆ (ಒಪಿಎಸ್) ವ್ಯಾಪ್ತಿಗೆ ಒಳಪಡಿಸುವ ವಿಷಯವಾಗಿ ರಾಜ್ಯ ಸರ್ಕಾರ ಮತ್ತೆ ನೌಕರರ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯದಲ್ಲಿ 2.45 ಲಕ್ಷ ಸರ್ಕಾರಿ ಉದ್ಯೋಗಿಗಳಿದ್ದು, ಅವರನ್ನು ಒಪಿಎಸ್ ವ್ಯಾಪ್ತಿಗೆ ಒಳಪಡಿಸುವ ವಿಚಾರದಲ್ಲಿ ಸರ್ಕಾರ ಪ್ರಯತ್ನ ಸಾಲುತ್ತಿಲ್ಲ ಎಂಬ ಆತಂಕ ನೌಕರರಿಗೆ ಶುರುವಾಗಿದೆ.

2006ರ ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆಯಾಗಿ ನಂತರ ನೇಮಕಗೊಂಡಿರುವ ಅಂದಾಜು 13 ಸಾವಿರ ನೌಕರರನ್ನು ಎನ್​ಪಿಎಸ್​ನಿಂದ ಒಪಿಎಸ್ ವ್ಯಾಪ್ತಿಗೆ ಒಳಪಡಿಸಿ ಸರ್ಕಾರ ಆದೇಶಿಸಿದೆ. ಎನ್​ಪಿಎಸ್ ನೌಕರರ ಮುಷ್ಕರದ ವೇಳೆ ಕೊಟ್ಟ ಮಾತಿನಿಂತೆ ಬೇಡಿಕೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಂಡಿದೆ. ಆದರೆ, 2006ರ ಏಪ್ರಿಲ್​ಗೆ ಮುನ್ನವೇ ಅಧಿಸೂಚನೆಯಾಗಿ ನಂತರ ನೇಮಕಾತಿ ಹೊಂದಿರುವ ನೌಕರರನ್ನು ಹಳೇ ಪಿಂಚಣಿ ವ್ಯವಸ್ಥೆಗೆ ಒಳಪಡಿಸುವಂತೆ ಸುಪ್ರೀಂಕೋರ್ಟ್ ಆದೇಶ ದನ್ವಯ ಕೇಂದ್ರ ಸರ್ಕಾರವೇ ನಿರ್ದೇಶನ ನೀಡಿತ್ತು.

ಇದರನ್ವಯ ಕರ್ನಾ ಟಕದಲ್ಲಿ 2021ರಲ್ಲೇ ಎನ್​ಪಿಎಸ್​ನಿಂದ ಒಪಿಎಸ್​ಗೆ ಒಳಪಡಿಸುವ ಪ್ರಕ್ರಿಯೆ ಆರಂಭವಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒತ್ತಡ ಹಾಕಿದ್ದರಿಂದ ಸ್ವಲ್ಪ ಬೇಗ ಆದೇಶವಾಯಿತು. ಅರ್ಹರಿಗೆ ಸೌಲಭ್ಯ ಸಿಕ್ಕಿದೆ. ಆದರೆ, 2006 ನಂತರ ನೇಮಕಗೊಂಡಿರುವ 2.45 ಲಕ್ಷ ನೌಕರರು ರಾಜ್ಯದಲ್ಲಿದ್ದಾರೆ. ಅವರೆಲ್ಲರನ್ನೂ ಎನ್​ಪಿಎಸ್​ನಿಂದ ಹಳೇ ಪಿಂಚಣಿ ವ್ಯವಸ್ಥೆಯ ವ್ಯಾಪ್ತಿಗೆ ಒಳಪಡಿಸಿದರಷ್ಟೇ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಹೇಳಬಹುದು. ಆದ್ದರಿಂದ ಆದಷ್ಟು ಬೇಗ ಎಲ್ಲ ನೌಕರರನ್ನು ಒಪಿಎಸ್​ಗೆ ಒಳಪಡಿಸಬೇಕು. ಇಲ್ಲವಾದರೆ ಮತ್ತೆ ಹೋರಾಟ ಮಾಡುವುದಾಗಿ ನೌಕರರು ಎಚ್ಚರಿಸಿದ್ದಾರೆ.

ವಾಸ್ತವದಲ್ಲಿ ಎನ್​ಪಿಎಸ್ ನೌಕರರನ್ನು ಸುಲಭವಾಗಿ ಒಪಿಎಸ್ ವ್ಯಾಪ್ತಿಗೆ ಒಳಪಡಿಸಲು ಸಾಧ್ಯವಿಲ್ಲ. ರಾಜ್ಯದ 2.45 ಲಕ್ಷ ನೌಕರರ ಎನ್​ಪಿಎಸ್ ಹಣ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಪಿಎಫ್​ಆರ್​ಡಿ) ಪಾವತಿಯಾಗಿದೆ. ಈ ಹಣವನ್ನು ವಾಪಸ್ ಕೊಡುವಂತೆ ರಾಜ್ಯ ಸರ್ಕಾರ ಕೇಳುತ್ತಿದೆ. ಆದರೆ, ಒಮ್ಮೆ ನೌಕರನ ಹೆಸರಲ್ಲಿ ಪಾನ್ ನಂಬರ್ ಸೃಷ್ಟಿಯಾಗಿ ಹಣ ಜಮೆಯಾದ ಬಳಿಕ ಆ ಹಣವನ್ನು ಏಕಾಏಕಿ ವಾಪಸ್ ಕೊಡಲು ಅವಕಾಶವಿಲ್ಲ. ಜಾರಿಯಲ್ಲಿರುವ ಕಾನೂನಿಗೆ ತಿದ್ದುಪಡಿ ತಂದ ನಂತರವಷ್ಟೇ ಹಿಂಪಡೆಯಬಹುದು. ಆದರೆ, ಕಾನೂನು ತಿದ್ದುಪಡಿ ತರುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲ ಸರ್ಕಾರಿ ನೌಕರರನ್ನೂ ಒಪಿಎಸ್ ವ್ಯಾಪ್ತಿಗೆ ತರುವಂತೆ ಸರ್ಕಾರಿ ನೌಕರರ ನಿಯೋಗ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಸ್ವಲ್ಪ ಸಮಯಾವಕಾಶ ಕೊಡಿ. ಸಾಧಕ-ಬಾಧಕಗಳನ್ನು ರ್ಚಚಿಸಿ, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಕಾರಾತ್ಮಕ ಭರವಸೆ ನೀಡಿದ್ದಾರೆಯೇ ಹೊರತು ಖಂಡಿತವಾಗಿಯೂ ಎನ್​ಪಿಎಸ್ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ಒಳಪಡಿಸುತ್ತೇವೆಂದು ಅಭಯ ಕೊಟ್ಟಿಲ್ಲ. ಹೀಗಾಗಿ ಸರ್ಕಾರದ ಈ ನಡೆಯ ಬಗ್ಗೆಯೂ ನೌಕರರ ವರ್ಗ ಅಸಮಾಧಾನ ಹೊರಹಾಕಿದೆ.

ಕೇಂದ್ರದಿಂದ ಸುಧಾರಣೆ ನಿರೀಕ್ಷೆ: ಹಳೇ ಪಿಂಚಣೆ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ರೈಲ್ವೆ ನೌಕರರು ಸೇರಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಎನ್​ಪಿಎಸ್​ನಲ್ಲಿ ಕೆಲ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವ ಬಗ್ಗೆ ಗುರುವಾರ (ಫೆ.1) ಬಜೆಟ್​ನಲ್ಲಿ ಘೋಷಿಸುವ ಬಗ್ಗೆಯೂ ಸರ್ಕಾರ ನೌಕರರಲ್ಲಿ ನಿರೀಕ್ಷೆ ಮೂಡಿದೆ.

ನೌಕರರ ಆಗ್ರಹವೇನು?

  • ರಾಜ್ಯದ ಇನ್ನೂ 2.45 ಲಕ್ಷ ನೌಕರರನ್ನು ಎನ್​ಪಿಎಸ್​ನಿಂದ ಒಪಿಎಸ್​ಗೆ ಒಳಪಡಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.
  • ಪಿಎಫ್​ಆರ್​ಡಿಗೆ ಪಾವತಿಯಾಗಿರುವ ಎನ್​ಪಿಎಸ್ ನೌಕರರ ಹಣ ವಾಪಸ್ ಪಡೆಯಲು ಅಗತ್ಯ ಕಾನೂನು ತಿದ್ದುಪಡಿ ಆರಂಭಿಸಬೇಕು.
  • ಸಾಧಕ-ಬಾಧಕಗಳ ಚರ್ಚೆಗೆ ಕಾಲಾವಕಾಶ ಪಡೆಯಲಿ. ಆದರೆ, ಎನ್​ಪಿಎಸ್ ನೌಕರರ ವಂತಿಕೆ ಕಡಿತಗೊಳ್ಳುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು.
  • ಅನುದಾನಿತ ಸಂಸ್ಥೆಗಳ ನೌಕರರ ಎನ್​ಪಿಎಸ್ ವಂತಿಕೆ ಪಾವತಿಯಾಗಿಲ್ಲ. ಈ ಗೊಂದಲವನ್ನು ಸರ್ಕಾರ ಪರಿಹರಿಸಬೇಕು.
  • ಲೋಕಸಭೆ ಚುನಾವಣಾ ನೀತಿಸಂಹಿತೆ ಜಾರಿಯಾಗುವ ಮುನ್ನವೇ ಎನ್​ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸಬೇಕು.
  • 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಕ್ರಮ ಕೈಗೊಳ್ಳಬೇಕು.

13000 ಮಂದಿಗೂ ಗೊಂದಲ

  • 2006 ಏಪ್ರಿಲ್ ಮುನ್ನ ಅಧಿಸೂಚನೆಯಾಗಿ ನಂತರ ನೇಮಕಗೊಂಡವರನ್ನು ಒಪಿಎಸ್ ವ್ಯಾಪ್ತಿಗೆ ತರಲಾಗಿದೆ. ಅವರಲ್ಲೂ ಕೆಲ ಗೊಂದಲ ಸೃಷ್ಟಿಯಾಗಿದೆ.
  • ಅನುಕಂಪದ ಆಧಾರದಲ್ಲಿ ನೇಮಕಗೊಂಡ 2000 ಪ್ರಕರಣಗಳಿವೆ. ಸಿಂಧುತ್ವ ಪ್ರಮಾಣಪತ್ರ ಪಡೆಯುವುದು ಸೇರಿ ಬೇರೆಬೇರೆ ಕಾರಣಕ್ಕೆ ಅವರ ನೇಮಕಾತಿ ವಿಳಂಬವಾಗಿದೆ. ಇಂತಹ ನೌಕರರ ಒಪಿಎಸ್ ಸೇರ್ಪಡೆ ಖಚಿತವಾಗಿಲ್ಲ
  • ಒಂದು ಇಲಾಖೆಗೆ ರಾಜೀನಾಮೆ ಕೊಟ್ಟು ಇನ್ನೊಂದು ಸರ್ಕಾರಿ ಉದ್ಯೋಗಕ್ಕೆ ಸೇರಿದವರು ಸಾಕಷ್ಟಿದ್ದಾರೆ. ಅಂತಹವರು ಒಪಿಎಸ್​ಗೆ ಬರುತ್ತಾರಾ ಎಂಬ ಗೊಂದಲ.
  • ಶಾಲಾ-ಕಾಲೇಜು ಸೇರಿ ಅನುದಾನಿತ ಸಂಸ್ಥೆಗಳಲ್ಲಿರುವ ನೌಕರರು ಒಪಿಎಸ್ ವ್ಯಾಪ್ತಿಗೆ ಬರುತ್ತಾರೋ ಇಲ್ಲವೋ ಎಂಬ ಸ್ಪಷ್ಟ ಮಾಹಿತಿಯೂ ಇಲ್ಲ.
  • ಪದವಿ ಕಾಲೇಜುಗಳ ಕೆಲ ಉಪನ್ಯಾಸಕರು ಎನ್​ಪಿಎಸ್ ಉತ್ತಮವಾಗಿದೆ ಎಂದು ಹೇಳುತ್ತಿದ್ದಾರೆ. ಆಗಸ್ಟ್ ಒಳಗೆ ಅವರ ಸ್ಪಷ್ಟ ಅಭಿಪ್ರಾಯವನ್ನು ಕೊಡಬೇಕಾಗುತ್ತದೆ.

ರಾಜ್ಯದ ಎಲ್ಲ ಸರ್ಕಾರಿ ನೌಕರರನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲೇಬೇಕು. ಆದರೆ, ಅದಕ್ಕಿಂತ ಮುಂಚೆ ಎನ್​ಪಿಎಸ್ ವಂತಿಕೆ ಕಡಿತಗೊಳ್ಳುತ್ತಿರುವುದನ್ನು ನಿಲ್ಲಿಸಲು ರಾಜ್ಯ ಸರ್ಕಾರ ಆದೇಶಿಸಬೇಕು.

| ಸಿ.ಎಸ್.ಷಡಾಕ್ಷರಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net