

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಮಂಜುಪ್ರಸಾದ್(55) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಅವರು ಬರೆದಿಟ್ಟಿದ್ದ ಡೆತ್ನೋಟ್ ಪತ್ತೆಯಾಗಿದೆ.
ಮೈಸೂರಿನ ಚಾಮುಂಡಿಪುರಂನಲ್ಲಿ ವಾಸವಿದ್ದ ಮಂಜುಪ್ರಸಾದ್ ಅವರು ಬುಧವಾರ ಮಧ್ಯಾಹ್ನ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿ ಇಲ್ಲದ ವೇಳೆ ನೇಣುಬಿಗಿದುಕೊಂಡು ಮೃತಪಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಕೆ.ಆರ್. ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಾಸಿಕೊಂಡಿದ್ದಾರೆ. 'ರಿಯಾಜ್ ಮತ್ತು ಜಾವಿದ್ ಎಂಬುವರಿಂದ ಜಯಲಕ್ಷ್ಮೀಪುರಂನಲ್ಲಿ ನಿವೇಶನ ಖರೀದಿಸಿದ್ದೆ. ಆ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದಾಗ ಗೊತ್ತಾಯಿತು ರಿಯಾಜ್ ಮತ್ತು ಜಾವಿದ್ ಅವರು ನನಗೆ ನೀಡಿರುವ ದಾಖಲೆಗಳು ಸುಳ್ಳು ಎಂದು. ಈ ಸಂಬಂಧ ದೂರು ಕೂಡ ದಾಖಲಾಗಿದೆ' ಎಂದು ಡೆತ್ನೋಟ್ನಲ್ಲಿ ಮಂಜುಪ್ರಸಾದ್ ಬರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.