ತಡರಾತ್ರಿವರೆಗೂ ನಡೆದ ವಿಧಾನ ಪರಿಷತ್​ ಕಲಾಪ: ಅರ್ಧ ರಾತ್ರಿ ಆಯ್ತು, ಚರ್ಚೆ ಮುಗಿಸಿ...

Vidhana Soudha vvani
Published on

ಬೆಂಗಳೂರು: ಗುರುವಾರ ತಡರಾತ್ರಿವರೆಗೂ ವಿಧಾನ ಪರಿಷತ್​ ಕಲಾಪ ನಡೆದಿದೆ. ವಿವಿಧ ಮಸೂದೆಗಳ ಅಂಗೀಕಾರದ ನಡುವೆಯೂ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಆರಂಭವಾದ ಚರ್ಚೆ ರಾತ್ರಿ 12 ಗಂಟೆ ಆದರೂ ನಡೆಯುತ್ತಲೇ ಇತ್ತು. ಅರ್ಧ ರಾತ್ರಿ ಆಯ್ತು, ಚರ್ಚೆ ಮುಗಿಸಿ ಎಂದು ಬಿಜೆಪಿ ಸದಸ್ಯರು ಹೇಳುತ್ತಿದ್ದರೂ ಸಚಿವ ಡಾ.ಅಶ್ವಥ್ ನಾರಾಯಣ ಉತ್ತರ ನೀಡಲು ಆರಂಭಿಸಿದರು. ಸಮಯ 12.35 ಆಗಿದ್ದರಿಂದ ಸಚಿವರ ಉತ್ತರದ ನಡುವೆಯೇ ಪರಿಷತ್ ಸಭೆಯನ್ನು ಶುಕ್ರವಾರ ಬೆಳಗ್ಗೆ 10ಕ್ಕೆ ಸಭಾಪತಿ ಹೊರಟ್ಟಿ ಮುಂದೂಡಿದರು.

ಗುರುವಾರ ಸಂಜೆ 4.30ರ ಸುಮಾರಿಗೆ ಆರಂಭವಾದ ಕಲಾಪದಲ್ಲಿ ನಿಯಮ 330ರ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಚರ್ಚೆ ಆರಂಭವಾಗಿತ್ತು. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡೆವೆ ವಾಗ್ವಾದವೂ ನಡೆಯಿತು. ಈ ನಡುವೆ ಸದನಕ್ಕೆ ಬಂದ ಸಿಎಂ ಬೊಮ್ಮಾಯಿ ಅವರು ಕರ್ನಾಟಕ ಧನವಿನಿಯೋಗ(ಪೂರಕ) ಅಂದಾಜು ಮಂಡಿಸಿ ಅನುಮೋದನೆ ಪಡೆದರು. ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕಗಳನ್ನೂ ವಿಧಾನ ಪರಿಷತ್​ನಲ್ಲಿ ಅಂಗೀಕಾರ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net