

ನವದೆಹಲಿ: ಭಾರತದ ಒಂದು ಪ್ರಮುಖ ಮಾಧ್ಯಮ ಸಂಸ್ಥೆ, ಪೊಲೀಸ್ ಇಲಾಖೆ ಮತ್ತು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಡೇಟಾಬೇಸ್ ಮಾಹಿತಿಗಳನ್ನು ಚೀನಾ ಮೂಲದ ಹ್ಯಾಕರ್ಸ್ ಕಳವು ಮಾಡಿರುವ ಸಾಧ್ಯತೆ ಇದೆ ಎಂದು ಅಮೆರಿಕದ ಖಾಸಗಿ ಸೈಬರ್ ಸೆಕ್ಯುರಿಟಿ ಕಂಪನಿಯೊಂದು ತಿಳಿಸಿದೆ. ಇದು ಚೀನಾದ ಸರ್ಕಾರಿ ಪ್ರಾಯೋಜಿತ ಗುಂಪಿನ ಕೃತ್ಯ
ವಾಗಿರಬಹುದು ಎಂದು ಮೆಸಾಚುಯೆಟ್ಸ್ನ ರೆಕಾರ್ಡೆಡ್ ಫ್ಯೂಚರ್ ಸಂಸ್ಥೆಯ ಅಪಾಯ ಸಂಶೋಧನಾ ವಿಭಾಗವಾದ ‘ದಿ ಇನ್ಸ್ಕಿಟ್ ಗ್ರೂಪ್’ ಹೇಳಿದೆ.
ಟಿಎಜಿ-28 ಎಂಬ ತಾತ್ಕಾಲಿಕ ಹೆಸರು ನೀಡಲಾಗಿರುವ ಹ್ಯಾಕಿಂಗ್ ಗುಂಪು, ವಿಂಟಿ ಮಾಲ್ವೇರ್ ಬಳಸಿದೆ ಎಂದು ಇನ್ಸ್ಕಿಟ್ ಹೇಳಿದೆ. ವಿಂಟಿ ಮಾಲ್ವೇರನ್ನು ಚೀನಾದ ಅನೇಕ ಸರ್ಕಾರಿ-ಪ್ರಾಯೋಜಿತ ಚಟುವಟಿಕೆ ಗುಂಪುಗಳು ಬಳಸುತ್ತಿವೆ. ಆದರೆ ಇದನ್ನು ನಿರಾಕರಿಸಿರುವ ಚೀನಾ, ಸ್ವತಃ ತಾನೇ ಸೈಬರ್ ದಾಳಿಯ ಪ್ರಮುಖ ಗುರಿ ಎಂದು ಹೇಳಿಕೊಂಡಿದೆ.
ಸಂಘರ್ಷ ಹೆಚ್ಚಳ ಸಾಧ್ಯತೆ: ಭಾರತೀಯ ಸಂಸ್ಥೆಗಳ ಮಾಹಿತಿಯ ಹ್ಯಾಕಿಂಗ್ ಆರೋಪ, ಏಷ್ಯಾದ ಎರಡು ಪ್ರಾದೇಶಿಕ ದೈತ್ಯ ಶಕ್ತಿಗಳ ನಡುವಿನ ಸಂಘರ್ಷವನ್ನು ಹೆಚ್ಚಿಸಲು ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಕಳೆದ ವರ್ಷ ಹಾಗೂ ಈ ವರ್ಷ ಸಂಭವಿಸಿದ ಗಡಿ ಸಂಘರ್ಷದಿಂದಾಗಿ ಉಭಯ ದೇಶಗಳ ನಡುವೆ ಈಗಾಗಲೇ ಬಿಗುವಿನ ವಾತಾವರಣ ನೆಲೆಸಿದ್ದು ಹ್ಯಾಕಿಂಗ್ ಆರೋಪ ಪರಿಸ್ಥಿತಿಯನ್ನು ಬಿಗಡಾಯಿಸಬಹುದು ಎನ್ನಲಾಗಿದೆ. ಮಧ್ಯ ಪ್ರದೇಶದ ಪೊಲೀಸ್ ಇಲಾಖೆಯ ಕೆಲವು ಮಾಹಿತಿಗಳಿಗೂ ಕನ್ನ ಹಾಕಲಾಗಿದೆ. ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕರೆ ನೀಡಿದ್ದರು.