

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್(69) ಅವರು ಭಾನುವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು. ಸಿನಿಮಾ ನಿರ್ಮಾಪಕ, ವಿತರಕ, ಪ್ರದರ್ಶಕ ಕೆಸಿಎನ್ ಗೌಡ ಅವರ ಪುತ್ರ ಕೆಸಿಎನ್ ಚಂದ್ರಶೇಖರ್. ಚಿಕ್ಕಬಳ್ಳಾಪುರ ಮೂಲದ ಚಂದ್ರಶೇಖರ್ ಅವರಿಗೆ ಇತ್ತೀಚಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹುಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಡಾ.ರಾಜ್ಕುಮಾರ್ ಅಭಿನಯದ 'ದಾರಿ ತಪ್ಪಿದ ಮಗ' ಸಿನಿಮಾಗೆ ಸಹ ನಿರ್ಮಾಪಕರಾಗಿ ಚಂದನವನಕ್ಕೆ ಕಾಲಿಟ್ಟ ಕೆಸಿಎನ್ ಚಂದ್ರಶೇಖರ್ ಅವರು 'ಬಬ್ರುವಾಹನ', 'ಹುಲಿ ಹಾಲಿನ ಮೇವು', 'ಜಯಸಿಂಹ', 'ನಮ್ಮೂರ ರಾಜ', 'ಆಹುತಿ', ಸುದೀಪ್ ಅಭಿನಯದ 'ನಲ್ಲ', ದರ್ಶನ್ ಅಭಿನಯದ 25ನೇ ಚಿತ್ರ 'ಭೂಪತಿ', 'ಸಾರಥಿ' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸಾರಥಿ ಸಿನಿಮಾವೇ ಇವರು ನಿರ್ಮಾಪಕರಾಗಿ ಕೆಲಸ ಮಾಡಿದ್ದ ಕೊನೆಯ ಚಿತ್ರ. ಕನ್ನಡ ಮಾತ್ರವಲ್ಲ, ತೆಲುಗು, ಬಂಗಾಳಿ ಸಿನಿಮಾಗಳನ್ನೂ ನಿರ್ಮಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ಕೆಸಿಎನ್ ಚಂದ್ರಶೇಖರ್, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ತೊಡಗಿಸಿಕೊಂಡಿದ್ದರು. ಫಿಲಂ ಫೆಡರೇಷನ್ ಆಫ್ ಇಂಡಿಯಾದಲ್ಲೂ ಕೆಲಸ ಮಾಡಿದ್ದರು. ಸೆನ್ಸಾರ್ ಬೋರ್ಡ್ನ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.