

ಕಲಬುರಗಿ: ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಕಲಬುರಗಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಗರದ ಎಸ್ವಿಪಿ ವೃತ್ತದಲ್ಲಿರುವ ವಿಮೋಚನಾ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ವಿಮೋಚನಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದರು.
ಇಂದು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಐತಿಹಾಸಿಕ ದಿನ. ನಿಜಾಮರ ಕಪಿಮುಷ್ಟಿಯಿಂದ ಮುಕ್ತಿ ಸಿಕ್ಕಿದ ಈ ದಿನ ಅವಿಸ್ಮರಣೀಯ. ಕಲ್ಯಾಣ ಕರ್ನಾಟಕ ವಿಮೋಚನೆಗೆ ಈ ಭಾಗದ ಹಲವು ಜನ ಹೋರಾಡಿದ್ದಾರೆ. ಹಿಂದುಳಿದ ಭಾಗದ ಸಮಗ್ರ ಅಭಿವೃದ್ಧಿಗೆ 371(ಜೆ) ಕಲಂ ಜಾರಿಗೆ ತರಲಾಗಿದೆ. ಪರಿಣಾಮ ಈ ಭಾಗದ ಲಕ್ಷಾಂತರ ಜನರಿಗೆ ಉದ್ಯೋಗ, ಶೈಕ್ಷಣಿಕ ಕ್ಷೇತ್ರದಲ್ಲಿ ಅವಕಾಶ ಸಿಕ್ಕಿದೆ. ಸಣ್ಣಪುಟ್ಟ ಕಾರ್ಯಕ್ರಮಗಳನ್ನ ಜಾರಿ ಮಾಡಿ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿಯಿರುವ ಹುದ್ದೆಗಳನ್ನ ಶೀಘ್ರವೇ ಭರ್ತಿ, ಕೆಕೆಆರ್‌ಡಿಬಿ ಮಂಡಳಿಗೆ ಖಾಯಂ ಕಾರ್ಯದರ್ಶಿ ನೇಮಕ, ಬೆಂಗಳೂರಿನಲ್ಲಿರುವ 371(ಜೆ) ಕಚೇರಿಯನ್ನ ಕಲಬುರಗಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಕೆಕೆಆರ್‌ಡಿಬಿ ಮಂಡಳಿಗೆ 3000 ಕೋಟಿ ರೂಪಾಯಿ ಅನುದಾನ ನೀಡಿ, ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಸದ್ವಿನಿಯೋಗ ಮಾಡಲಾಗುವುದು ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ಕೆಕೆಆರ್‌ಡಿಬಿ ಮತ್ತು ನಂಜುಂಡಪ್ಪ ವರದಿ ಪರಿಶೀಲನೆ ಮಾಡಲಾಗುವುದು. ಯಾದಗಿರಿಯಲ್ಲಿ ಫಾರ್ಮ್ ಪಾರ್ಕ್ ಮಾಡಲು ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುವುದು. ಕಲಬುರಗಿ ಜಿಲ್ಲೆಯನ್ನ ಸಿಮೆಂಟ್ ನಗರಿ ಅಂತಾ ಕರೆಯುತ್ತಾರೆ. ಆದರೆ ಈ ಭಾಗದ ಜನರಿಗೆ ಸಿಮೆಂಟ್ ಕಂಪನಿಗಳಿಂದ ಲಾಭವಾಗುತ್ತಿಲ್ಲ. ಈ ಭಾಗದ ನೆಲ-ಜಲ- ಸಂಪತ್ತು ಬಳಸಿಕೊಂಡು ಸಿಮೆಂಟ್ ಕಂಪನಿಗಳು ಶ್ರೀಮಂತವಾಗಿವೆ. ಸಿಮೆಂಟ್ ಕಂಪನಿಗಳು ಜನರಿಗೆ ಸಹಾಯ ಮಾಡಲೇಬೇಕು. ಇಲ್ಲಾಂದ್ರೆ ಸಿಮೆಂಟ್ ಕಂಪನಿಗಳು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ ಕೊಟ್ಟರು.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಕಲಬುರಗಿ ಡಿಎಆರ್ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಅವರು ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು.
ಸಚಿವ ಮುರುಗೇಶ್ ನಿರಾಣಿ, ಶಾಸಕರಾದ ಬಿ.ಜಿ.ಪಾಟೀಲ್, ದತ್ತಾತ್ರೇಯ ಪಾಟೀಲ್, ಶಶೀಲ್ ನಮೋಶಿ, ರಾಜಕುಮಾರ ಪಾಟೀಲ್, ಬಸವರಾಜ ಮತ್ತಿಮೂಡ, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.