ಹೆಸರು ಬದಲಿಸಿದರೆ ಸಾಲದು, ಅಭಿವೃದ್ಧಿ ಕಡೆ ಲಕ್ಷ್ಯವೂ ಬೇಕು

Name
ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿ ಹೊರನೋಟ.
Published on

‘ಕಲ್ಯಾಣ’ ಎಂಬ ಪದದ ಅರ್ಥ ಬಹಳ ವಿಶೇಷ ಹಾಗೂ ಅರ್ಥಪೂರ್ಣವಾದದ್ದು. ಈ ಭಾಗ ಸರ್ವ ರೀತಿಯಿಂದಲೂ ಸಶಕ್ತ, ಸದೃಢ, ಸಮೃದ್ಧವಾಗಬೇಕು. ಸಮಸ್ಯೆಗಳಿಂದ ಮುಕ್ತವಾಗಬೇಕು. ಮುಂದುವರಿದ ಪ್ರದೇಶಗಳಿಗೆ ಸಮನಾಗಿ ನಿಲ್ಲಬೇಕು. ಆಗಲೇ ‘ಕಲ್ಯಾಣ ಕರ್ನಾಟಕ’ ಹೆಸರಿಗೆ ಸಾರ್ಥಕತೆ ಬರುತ್ತದೆ. ಇದಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಬಲಗೊಳ್ಳಬೇಕಿದೆ. ಹೆಸರಿಗಿಂತಲೂ ಮುಖ್ಯವಾಗಿ ಆಳುವ ಸರ್ಕಾರಗಳ ಮನಸ್ಸು ಬದಲಾಗಬೇಕಿದೆ.

| ಸ.ದಾ. ಜೋಶಿ ಕಲಬುರಗಿ

ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಧಾರ್ವಿುಕವಾಗಿ ‘ಕಲ್ಯಾಣ ಕರ್ನಾಟಕ’ ಶ್ರೀಮಂತಿಕೆ ಮೆರೆದಿದೆ. ಆದರೆ ಆಗಿನ ಕಲ್ಯಾಣ ಮತ್ತು ಈಗಿನ ಕಲ್ಯಾಣ ಕರ್ನಾಟಕಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಂವಿಧಾನದ 371(ಜೆ) ವಿಧಿ ಅಡಿ ವಿಶೇಷ ಸ್ಥಾನಮಾನ ಕಲ್ಪಿಸಿದರೆ, ಹೈದರಾಬಾದ್ ಕರ್ನಾಟಕಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿದರೆ ಪರಿಸ್ಥಿತಿ ಬದಲಾಯಿತಾ ಎಂಬ ಪ್ರಶ್ನೆಗೆ ಈ ಭಾಗದ ಜನರಿಗೆ ಉತ್ತರಿಸುವುದೇ ಕಷ್ಟಕರ. ‘ಕಲ್ಯಾಣ ಕರ್ನಾಟಕ’ ಭಾಗ ಇಂದಿಗೂ ಹಿಂದುಳಿಕೆ ಮತ್ತು ಸಿಕ್ಕ ಅವಕಾಶಗಳ ಸದ್ಬಳಕೆಯಲ್ಲಿ ವಿಫಲತೆಗೆ ಅನೇಕ ಕಾರಣಗಳಿವೆ. ಇದರಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಪ್ರಮುಖ. ಸರ್ಕಾರಗಳು ಕಡೆಗಣಿಸಿವೆ ಎನ್ನುವುದು ಒಂದೆಡೆಯಾದರೆ, ಈ ಭಾಗದ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಅಭಿವೃದ್ಧಿಗಾಗಿ ಸಂಘಟಿತ ಹೋರಾಟ ನಡೆಸದಿರುವುದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಗಟ್ಟಿ ಧ್ವನಿ ಎತ್ತದೇ ಇರುವುದರಿಂದ ಎಂದೋ ಬಗೆಹರಿಯಬೇಕಾದ ಅನೇಕ ಸಮಸ್ಯೆ ಇಂದಿಗೂ ಜೀವಂತ ಉಳಿದಿವೆ.

ಕಾಯ್ದೆ ರೂಪದಲ್ಲಿ ಜಾರಿಗೊಂಡ 8 ವರ್ಷ ಬಳಿಕವೂ 371(ಜೆ) ವಿಧಿ ಸಮರ್ಪಕ ಅನುಷ್ಠಾನಗೊಂಡಿಲ್ಲ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಇದರ ಕೋಶ (ಸೆಲ್) ಕಲಬುರಗಿಗೆ ಸ್ಥಳಾಂತರಿಸಲು ಸಾಧ್ಯವಾಗಿಲ್ಲ. ನೇರ ನೇಮಕಕ್ಕೆ ಬ್ರೇಕ್ ಬಿದ್ದಿದೆ. ವಿದರ್ಭ ಮಾದರಿ ಕೇಂದ್ರ ಸರ್ಕಾರದಿಂದ ನಯಾಪೈಸೆ ಅನುದಾನ ತರಲಾಗಿಲ್ಲ. ಈ ಭಾಗದ ಸಂಪೂರ್ಣ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್ ಮಂಡನೆ ಪ್ರಮುಖ ರಹದಾರಿ ಎಂಬ ಡಾ.ನಂಜುಂಡಪ್ಪ ಸಮಿತಿ ವರದಿ ಶಿಫಾರಸು ಧೂಳು ತಿನ್ನುತ್ತಿದೆ. ಕಲಬುರಗಿಯಲ್ಲಿ ನಿಯಮಿತ ಸಂಪುಟಸಭೆ ನಡೆಸುವ ಕೆಲಸವೂ ಆಗದಿರುವುದು ಕಳವಳಕಾರಿ ಸಂಗತಿ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್​ಡಿಬಿ)ಗೆ ಎಂಟು ವರ್ಷಗಳಿಂದ ಘೊಷಿತ (ಸುಮಾರು 9000 ಕೋಟಿ ರೂ.) ಅನುದಾನ ಬಂದಿಲ್ಲ. ಕೊಟ್ಟಷ್ಟೂ ಪೂರ್ಣ ಬಳಕೆಯಾಗಿಲ್ಲ. ಮಂಡಳಿಗೆ ಈವರೆಗೂ ತಜ್ಞರು, ಜನಪ್ರತಿನಿಧಿಗಳನ್ನೊಳಗೊಂಡ ಆಡಳಿತ ಮಂಡಳಿ ರಚಿಸಿಲ್ಲ. ಈ ಭಾಗಕ್ಕೆ ಮಹತ್ವದ ಯೋಜನೆ, ಬೃಹತ್ ಕೈಗಾರಿಕೆ ಬರುತ್ತಿಲ್ಲ. ಬದಲಾಗಿ ಒಂದೊಂದೇ ಯೋಜನೆ ಕೈಜಾರುತ್ತಿವೆ.

ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಇದೆಯೇ ಹೊರತು, ನಮ್ಮ ಭಾಗದ ನೈಜ ‘ಕಲ್ಯಾಣ’ ಆಗಲಿದೆ ಎಂಬ ವಿಶ್ವಾಸ ಜನರಲ್ಲಿ ಮೂಡುತ್ತಿಲ್ಲ. ಆದ್ಯತೆ ಮೇರೆಗೆ ಆಗಬೇಕಾದ ಹಲವು ಮಹತ್ವದ ಕೆಲಸಗಳತ್ತ ಗಂಭೀರ ಚಿತ್ತ ಹರಿಸುವ ಬದಲು ‘ವಿಷನ್-2050’ನಂಥ ಅಂಗೈಯಲ್ಲಿ ಅರಮನೆ ತೋರಿಸುವ ಕಾರ್ಯ ನಡೆದಿದೆ. ಹೀಗಾದಲ್ಲಿ ಈ ಭಾಗದ ಕಲ್ಯಾಣ ಯಾವಾಗ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.

ಬರುತ್ತಾ ಹೆಚ್ಚುವರಿ ಹಣ?: ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ (ಹೊಸ ವಿಜಯನಗರ ಸೇರಿ) ಜಿಲ್ಲೆಗಳು ಎಲ್ಲ ಹಂತದಲ್ಲಿ ಹಿಂದುಳಿದಿವೆ ಎಂಬುದನ್ನು ಡಾ.ನಂಜುಂಡಪ್ಪ ಸಮಿತಿ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸ ಲಾಗಿದೆ. ಇತರ ಮುಂದುವರಿದ ಜಿಲ್ಲೆಗಳ ಜತೆಗೆ ಪೈಪೋಟಿ ನೀಡಲು ಹೆಚ್ಚುವರಿ ಹಣ ಕೊಟ್ಟು, ಅದರ ಸದ್ಬಳಕೆ ಆಗುವಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದೂ ಉಲ್ಲೇಖಿಸಲಾಗಿದೆ. ಆದರೆ, ಹೆಚ್ಚುವರಿ ಹಣವಂತೂ ಬಂದಿಲ್ಲ.

ಹೊಸ ಯೋಜನೆ ನಿರೀಕ್ಷೆಯಲ್ಲಿ...: ಹೈದರಾಬಾದ್ ಕರ್ನಾಟಕಕ್ಕೆ ಸರ್ಕಾರ ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿ ಎರಡು ವರ್ಷವಾಗಿದೆ. ಇದಾದ ನಂತರದ ಸ್ಥಿತಿ ಅವಲೋಕಿಸಿದರೂ ಹೆಸರು ಬದಲಾಗಿದೆ ಎಂಬ ಸಮಾಧಾನ ಬಿಟ್ಟರೆ, ಕಲ್ಯಾಣಕ್ಕೆ ಪೂರಕವಾದ ಯಾವುದೇ ಕೆಲಸ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ ಎಂಬುದು ಸುಳ್ಳಲ್ಲ. ಇನ್ನಾದರೂ ಆಳುವವರ ಮನಸ್ಥಿತಿ, ಕಾರ್ಯಶೈಲಿ, ದೃಷ್ಟಿಕೋನ ಬದಲಾಗಲಿ. ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಬಂದು ರಾಷ್ಟ್ರ ಧ್ವಜಾರೋಹಣ ನೆರವೇರಿಸುವುದಕ್ಕೆ ಮುಖ್ಯಮಂತ್ರಿಗಳು ಸೀಮಿತ ಆಗಕೂಡದು. ಕಲ್ಯಾಣ ಎಂಬ ಪದಕ್ಕೆ ನೈಜತೆ ತರುವಂಥ ಕೆಲಸ ಮಾಡಬೇಕು ಎಂಬ ಜನರ ಬೇಡಿಕೆಗೆ ಶುಕ್ರವಾರ ಕಲಬುರಗಿಗೆ ಆಗಮಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಸ್ಪಂದಿಸುವರೇ? ಈ ಭಾಗದ ವಿಕಾಸಕ್ಕೆ ಹೊಸ ಮುನ್ನುಡಿ ಬರೆಯುವಂಥ ಯೋಜನೆ ಘೊಷಿಸಬಹುದೇ? ಕಾದು ನೋಡಬೇಕು.

ವಿಮೋಚನಾ ಹುತಾತ್ಮರ ಸ್ಮರಣೆಗೆ ಸ್ಮಾರಕ ಸ್ಥಾಪಿಸಿ: ದೇಶ ಸ್ವಾತಂತ್ರ್ಯೊಂಡ 13 ತಿಂಗಳ ನಂತರ (1948ರ ಸೆಪ್ಟೆಂಬರ್ 17) ‘ಕಲ್ಯಾಣ ಕರ್ನಾಟಕ’ ಭಾಗಕ್ಕೆ ವಿಮೋಚನೆ ಸಿಕ್ಕಿದೆ. ಹೈದರಾಬಾದ್ ನಿಜಾಮ್ಾಹಿ ಹುಕುಮತ್ ಮತ್ತು ರಜಾಕಾರರ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ನಡೆದ ಹೋರಾಟದಲ್ಲಿ ಅನೇಕರ ತ್ಯಾಗ, ಬಲಿದಾನವಾಗಿದೆ. ರಕ್ತಸಿಕ್ತ ಆ ಕ್ರಾಂತಿ ಮುಂದಿನ ಪೀಳಿಗೆಗೆ ಗೊತ್ತಾಗಲು ಸರ್ಕಾರ ವಿಮೋಚನಾ ಚಳವಳಿಯನ್ನು ಪಠ್ಯಕ್ಕೆ ಸೇರಿಸಬೇಕು. ಹುತಾತ್ಮ ವೀರರ ಗೌರವಾರ್ಥ ವಿಭಾಗ ಕೇಂದ್ರ ಕಲಬುರಗಿಯಲ್ಲಿ ಸ್ಮಾರಕ ಸ್ಥಾಪಿಸಬೇಕು. ಒಂದೇ ದಿನ ನೂರಾರು ಮಂದಿ ಬಲಿದಾನವಾದ ಬೀದರ್ ಜಿಲ್ಲೆ ಗೋರ್ಟಾ(ಬಿ) ಗ್ರಾಮಕ್ಕೆ ‘ಕರ್ನಾಟಕದ ಜಲಿಯನ್​ವಾಲಾ ಬಾಗ್’ ಎಂದು ಘೊಷಿಸಬೇಕು. ಈ ಭಾಗ ವಿಮೋಚನೆಯಾಗಿ ಬರುವ ವರ್ಷ 75 ವರ್ಷ ತುಂಬುತ್ತಿರುವ ಕಾರಣ ವರ್ಷವಿಡೀ ಸರ್ಕಾರದಿಂದ ಅಮೃತೋತ್ಸವ ಆಚರಿಸಬೇಕು ಎಂಬುದು ಜನರ ಪ್ರಮುಖ ಬೇಡಿಕೆಗಳಲ್ಲಿ ಸೇರಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net