

ಉಡುಪಿ: ಗುರು ಗ್ರಹ ಸೆ.26ರಂದು ಭೂಮಿಯ ಅತಿ ಸನಿಹ ಬರಲಿದೆ. ಈ ಸೌರ ವಿದ್ಯಮಾನವನ್ನು ಜೂಪಿಟರ್ ಒಪೊಸಿಷನ್ ಎನ್ನುತ್ತಾರೆ. ಈ ಗ್ರಹ ವರ್ಷಕ್ಕೊಮ್ಮೆ ಭೂಮಿಗೆ ಸಮೀಪದಲ್ಲಿ ಹಾದುಹೋದರೂ ಈ ವರ್ಷ 70 ವರ್ಷಗಳಲ್ಲೇ ಹಾದುಹೋಗುವ ಅಂತರ ಕಡಿಮೆ ಇರಲಿದೆ.
ಸೂರ್ಯನ ಸುತ್ತ ದೀರ್ಘವೃತ್ತದಲ್ಲಿ ಸುತ್ತುವ ಭೂಮಿ ಹಾಗೂ ಗುರುಗ್ರಹ 13 ತಿಂಗಳಿಗೊಮ್ಮೆ ಸಮೀಪಿಸುತ್ತವೆ. ಹೀಗಾದಾಗ ಸೂರ್ಯಾಸ್ತವಾದೊಡನೆ ಪೂರ್ವ ಆಕಾಶದಲ್ಲಿ ಗುರು ಉದಯವಾಗಿ ರಾತ್ರಿ ಪೂರ್ತಿ ಕಾಣಿಸುತ್ತದೆ.
ಈ ವರ್ಷ ಈಗ 59.1 ಕೋಟಿ ಕಿ.ಮೀ. ದೂರದಲ್ಲಿ ಬರಲಿದೆ. ಇನ್ನಾರು ತಿಂಗಳಿಗೆ ಭೂಮಿಗೆ ದೂರದ ದೂರ 94 ಕೋಟಿ ಕಿ.ಮೀ. ದೂರದಲ್ಲಿ ಬರಲಿದೆ. ಹಾಗಾಗಿ ಬರಿಗಣ್ಣಿಗೆ ಸಂಜೆ ಪೂರ್ವ ಆಕಾಶದಲ್ಲಿ ಹೊಳೆಯುತ್ತಿರುವ ಗುರು ಗ್ರಹ ಕಾಣಿಸುತ್ತದೆ. ದೂರದರ್ಶಕದಲ್ಲಿ ಈ ಗ್ರಹ ಬಹಳ ಅಂದವಾಗಿ ಕಾಣುತ್ತದೆ ಎಂದು ಉಡುಪಿಯ ವಿಜ್ಞಾನಿ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.