ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಸಿಪಿಐ ಇಲ್ಲಾಳ್: ಹೆಚ್ಚಿನ ಚಿಕಿತ್ಸೆಗೆ ಏರ್​ಲಿಫ್ಟ್ ಮೂಲಕ ಬೆಂಗಳೂರಿಗೆ ಸ್ಥಳಾಂತರ

cpi srimantha illal
Published on

ಕಲಬುರಗಿ: ಕರ್ನಾಟಕ-ಮಹಾರಾಷ್ಟ್ರ ಗಡಿಯ ತೋರ್ಲೆವಾಡಿ ಬಳಿ ಜಮೀನಿನಲ್ಲಿ ಗಾಂಜಾ ಗ್ಯಾಂಗ್​ನಿಂದ ಹಲ್ಲೆಗೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಗ್ರಾಮೀಣ ಪೊಲೀಸ್​ ಠಾಣೆ ಸಿಪಿಐ ಶ್ರೀಮಂತ ಇಲ್ಲಾಳ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯಿಂದ ಏರ್​ಲಿಫ್ಟ್​ ಮೂಲಕ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಸೋಮವಾರ ಬೆಳಗ್ಗೆ ಸ್ಥಳಾಂತರಿಸಲಾಯಿತು.

ಮಹಾರಾಷ್ಟ್ರದ ತರಲೆವಾಡಿ ಗ್ರಾಮದ ಬಳಿ ಗಾಂಜಾ ಮಾಫಿಯಾದ ಮೇಲೆ ದಾಳಿ ಮಾಡಲು ಹೋದಾಗ ಕಿಡಿಗೇಡಿಗಳು ಶ್ರೀಮಂತ ಇಲ್ಲಾಳ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೊರಾಡುತ್ತಿರುವ ಇಲ್ಲಾಳ ಅವರನ್ನು ಕಲಬುರಗಿ ನಗರದ ಯುನೈಟೆಡ್​ ಆಸ್ಪತ್ರೆ ಐಸಿಯುನಲ್ಲಿ ಪರಿಣತ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಶನಿವಾರಕ್ಕಿಂತಲೂ ಭಾನುವಾರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಆದರೂ ಕುಟುಂಬದವರ ಒತ್ತಾಸೆಯಂತೆ ಇಲ್ಲಾಳ ಅವರನ್ನು ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಸಾಗಿಸಲು ಜಿಲ್ಲಾ ಮತ್ತು ನಗರ ಪೊಲೀಸರು ನಿರ್ಧರಿಸಿ ಕರೆದೊಯ್ದಿದ್ದಾರೆ.

ಆಸ್ಪತ್ರೆಯಿಂದ ಕಲಬುರಗಿ ವಿಮಾನ ನಿಲ್ದಾಣದವರೆಗೂ ಝಿರೋ ಟ್ರಾಫಿಕ್ ಮೂಲಕ ಏರ್ ಪೋರ್ಟ್​ಗೆ ಆಂಬುಲೆನ್ಸ್​ನ್ಲಲಿ ಕರೆತರಲಾಯಿತು. ಮೂವರು ವೈದ್ಯರು ಹಾಗೂ ಶ್ರೀಮಂತ ಇಲ್ಲಾಳ ಅವರ ಪತ್ನಿ, ಪುತ್ರ ಕೂಡ ಏರ್ ಆಂಬುಲೆನ್ಸ್​ನಲ್ಲಿ ಬೆಂಗಳೂರಿಗೆ ಆಗಮಿಸಿದರು. ಏರ್ ಲಿಫ್ಟ್ ಸೇರಿ ಇಡೀ ಚಿಕಿತ್ಸಾ ವೆಚ್ಚವನ್ನು ಪೊಲೀಸ್ ಇಲಾಖೆಯೇ ಭರಿಸಲಿದೆ.

ಜಿಲ್ಲಾಧಿಕಾರಿ ಯಶವಂತ ಗುರುಕರ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಇಶಾ ಪಂತ್​ ಹಾಗೂ ನಗರ ಪೊಲೀಸ್​ ಆಯುಕ್ತ ಡಾ.ರವಿಕುಮಾರ ವೈ.ಎಸ್​. ಕೋರಿಕೆಯಂತೆ ಕೇರಳದ ಕೊಚ್ಚಿಯಿಂದ ವಿಶೇಷ ಏರ್​ ಆಂಬುಲೆನ್ಸ್​ ಅನ್ನು ಸರ್ಕಾರ ಭಾನುವಾರ ಸಂಜೆಯೇ ಕಲಬುರಗಿಗೆ ಕಳುಹಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net