ಇಟಿಎಫ್ ಸಿಬ್ಬಂದಿ ಜೀಪು ಬೆನ್ನಟ್ಟಿದ ಕಾಡಾನೆ

ಬೇಲೂರು ತಾಲೂಕಿನ ಬಿಕ್ಕೋಡು ಸಮೀಪದ ಮುವ್ವಾಲ ಗ್ರಾಮದಲ್ಲಿ ಕಾಡಾನೆ ಚಲನವಲನ ಗಮನಿಸುತಿದ್ದ ಇಟಿಎಫ್ ಸಿಬ್ಬಂದಿಯ ಜೀಪನ್ನೆ ಕಾಡಾನೆ ಅಟ್ಟಾಡಿಸುತ್ತಿರುವ ಕಾಡಾನೆ
ಬೇಲೂರು ತಾಲೂಕಿನ ಬಿಕ್ಕೋಡು ಸಮೀಪದ ಮುವ್ವಾಲ ಗ್ರಾಮದಲ್ಲಿ ಕಾಡಾನೆ ಚಲನವಲನ ಗಮನಿಸುತಿದ್ದ ಇಟಿಎಫ್ ಸಿಬ್ಬಂದಿಯ ಜೀಪನ್ನೆ ಕಾಡಾನೆ ಅಟ್ಟಾಡಿಸುತ್ತಿರುವ ಕಾಡಾನೆ
Published on

ಬೇಲೂರು: ಘಟನೆ ತಾಲೂಕಿನ ಬಿಕ್ಕೋಡು ಸಮೀಪದ ಮುವ್ವಾಲ ಗ್ರಾಮದಲ್ಲಿ ಸೋಮವಾರ ಸಂಜೆ ಕಾಡಾನೆಗಳ ಇರುವಿಕೆ ಬಗ್ಗೆ ಚಲನವಲನ ಗಮನಿಸುತ್ತಿದ್ದ ಇಟಿಎಫ್ ಸಿಬ್ಬಂದಿಯ ಜೀಪನ್ನೇ ಕಾಡಾನೆ ಅಟ್ಟಾಡಿಸಿ ಕೆಲ ಹೊತ್ತು ಆತಂಕ ಸೃಷ್ಟಿಸಿತು. ಅದೃಷ್ಟವಶಾತ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ಬೇಲೂರು ತಾಲೂಕಿನ ಬಿಕ್ಕೋಡು ಸಮೀಪದ ಎಸ್ಟೇಟ್‌ನಲ್ಲಿ ಸೋಮವಾರ ಬೆಳಗ್ಗೆ ಕಾರ್ಮಿಕರನ್ನು ಅಟ್ಟಾಡಿಸಿದ ಓಲ್ಡ್‌ಬೆಲ್ಟ್ ಗುಂಪಿನ ನೇತೃತ್ವ ವಹಿಸುತಿದ್ದ ಹಿರಿಯಮ್ಮ (ಮೇಟ್ರಿಯಮ್ಮ)ಆನೆಗೆ ಮೂರು ದಿನಗಳ ಹಿಂದಷ್ಟೇ ದಸರೆ ಸಾಕಾನೆಗಳ ಸಹಾಯದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಟ್ಟಿದ್ದರು. ಆದರೆ ಈ ಆನೆಯೂ ಗುಂಪಿನಿಂದ ಬೇರ್ಪಟ್ಟು ರೊಚ್ಚಿಗೆದ್ದು ಬಿಕ್ಕೋಡು ಸಮೀಪದ ಕಾಡು ಮತ್ತು ತೋಟಗಳಲ್ಲಿ ಓಡಾಡುತಿತ್ತು. ಆದರೆ ಸೋಮವಾರ ಬೆಳಗ್ಗೆ ತಾಲೂಕಿನ ಬಿಕ್ಕೋಡು ಸಮೀಪದ ಎಸ್ಟೇಟ್‌ನಲ್ಲಿ ಕೆಲಸ ಮಾಡುವುದಕ್ಕಾಗಿ ಕೂಲಿ ಕಾರ್ಮಿಕರು ಗುಂಪಾಗಿ ತೆರಳುತ್ತಿದ್ದ ಸಂದರ್ಭ ಏಕಾ ಏಕಿ ಕಾಡಾನೆ ಆಗಮಿಸಿ ಅಟ್ಟಾಡಿಸಿದ್ದರಿಂದ ನಾಲ್ವರು ಬಿದ್ದು ಗಾಯಗೊಂಡಿದ್ದರು.

ಆದರೆ ಆ ಘಟನೆ ನಡೆದ ಕೆಲವು ಗಂಟೆಗಳಲ್ಲೇ ಹಿರಿಯಮ್ಮ (ಮೇಟ್ರಿಯಮ್ಮ)ಆನೆ ತೋಟದೊಳಗಿನಿಂದ ಏಕಾಏಕಿ ರಸ್ತೆಯಲ್ಲಿ ಚಲನವಲನ ಗಮನಿಸುತ್ತಿದ್ದ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿಯಿದ್ದ ಜೀಪನ್ನೇ ಅಟ್ಟಾಡಿಸಿದೆ. ಕಾಡಾನೆ ದಾಳಿಗೆ ಮುಂದಾಗುತ್ತಿದ್ದಂತೆ ಎಚ್ಚೆತ್ತ ಚಾಲಕ ವೇಗದಿಂದ ಹಿಮ್ಮುಖವಾಗಿ ಜೀಪನ್ನು ಚಲಾಯಿಸಿದ್ದರಿಂದ ರೊಚ್ಚಿಗೆದ್ದಿರುವ ಕಾಡಾನೆ ಸ್ವಲ್ಪ ದೂರ ಹಿಂಬಾಲಿಸಿ ವಾಪಸ್ ಬಂದಿದ್ದರಿಂದ ದೊಡ್ಡ ಅವಘಡ ತಪ್ಪಿದಂತಾಗಿದೆ.

ರೊಚ್ಚಿಗೆದ್ದಿರುವ ಹಿರಿಯಮ್ಮ ಕಾಡಾನೆಯನ್ನು ಗುಂಪಿಗೆ ಸೇರಿಸಬೇಕು. ಇಲ್ಲವೇ ಆದಷ್ಟು ಬೇಗ ಹಿಡಿದು ದೂರದ ಕಾಡಿಗೆ ಬಿಟ್ಟರಷ್ಟೆ ಒಳಿತು. ಇಲ್ಲದಿದ್ದಲ್ಲಿ ಸಿಕ್ಕಸಿಕ್ಕವರ ಮೇಲೆ ದಾಳಿಗೆ ಮುಂದಾಗಿ ಏನಾದರೂ ಅನಾಹುತ ಮಾಡಿದರೆ ಯಾರೂ ಹೊಣೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಜನರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net