

ಬೆಂಗಳೂರು: ದೇಶದಲ್ಲಿ ಕರೊನಾ ಲಸಿಕೆ(Corona vaccine) ಅಭಿಯಾನವು ಬಿರುಸಿನಿಂದ ಸಾಗುತ್ತಿದೆ. ಈಗಾಗಲೇ ಭಾರತ 100 ಕೋಟಿ ಕರೊನಾ ಲಸಿಕೆ ಡೋಸ್ ಮೈಲಿಗಲ್ಲನ್ನು ಮುಟ್ಟಿದೆ.
'100 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಕ್ಟೋಬರ್ 15ಕ್ಕೆ 96 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಪೂರೈಕೆಯಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಕೂ ಮಾಡಿದ್ದು, 'ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಮುಂಚೂಣಿಯಲ್ಲಿ ಕೆಲಸ ಮಾಡಿದ ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳು. ಈ #LargestVaccineDrive ದೊಡ್ಡ ಯಶಸ್ಸನ್ನು ಸಾಧಿಸಲು ಸಕ್ರಿಯವಾಗಿ ಭಾಗವಹಿಸಿದ ಎಲ್ಲ ನಾಗರಿಕರಿಗೂ ಅಭಿನಂದನೆಗಳು' ಎಂದು ಕೂ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೂ ಮಾಡಿರುವ ಆರೋಗ್ಯ ಸಚಿವ ಸುಧಾಕರ್ ಅವರು ಭಾರತ ಲಸಿಕೆ ಪೂರೈಕೆಯಲ್ಲಿ ಸಾಧಿಸಿರುವ ಮೈಲಿಗಲ್ಲಿಗೆ ಸಂಭ್ರಮ ವ್ಯಕ್ತಪಡಿಸಿದ್ದು, 'ಈ ಮಹತ್ವದ ಸಾಧನೆಗೆ ಕೈಜೋಡಿಸಿದ ನಮ್ಮ ಎಲ್ಲ ಶ್ರಮಜೀವಿ ವಿಜ್ಞಾನಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಉತ್ಸಾಹಭರಿತ ನಾಗರಿಕರಿಗೆ ದೊಡ್ಡ ಚಪ್ಪಾಳೆ. ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಭಾರತದ ಶತಕೋಟಿ ಡೋಸ್ ದೊಡ್ಡ ಉತ್ತೇಜನವಾಗಿದೆ' ಎಂದು ಹೇಳಿದ್ದಾರೆ.
'ಜಗತ್ತು ಜೈ ಹಿಂದ್ ಕಥೆಯನ್ನು ಕೇಳುತ್ತಿದೆ, ಏನು ಮಾಡಲಾಗದಿದ್ದರೂ, ಭಾರತ ಅದನ್ನು ಮಾಡಿದೆ. ಈಗ ಕೋವಿಡ್ನೊಂದಿಗೆ ಸ್ವಲ್ಪ ಹೆಚ್ಚು ಹೋರಾಟ, 100 ಕೋಟಿ ಲಸಿಕೆ ಹಾಕಿದ ಎಲ್ಲಾ ದೇಶವಾಸಿಗಳಿಗೆ ಅಭಿನಂದನೆಗಳು' ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಕೂ ಮಾಡಿದೆ.
100 ಕೋಟಿ ಕರೋನಾ ಲಸಿಕೆ (Corona vaccine) ಡೋಸ್ ಪೂರ್ಣಗೊಂಡಿರುವ ಸಂಭ್ರಮವನ್ನು ಎಲ್ಲ ರೈಲ್ವೆ ನಿಲ್ದಾಣ, ಎಲ್ಲಾ ವಿಮಾನ ನಿಲ್ದಾಣ, ಬಸ್ ನಿಲ್ದಾಣ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಬಗ್ಗೆ ಘೋಷಿಸುವ ಮೂಲಕ ಆಚರಿಸಲಾಗುತ್ತಿದೆ.