ಅಕ್ರಮ ಆಸ್ತಿ ಪ್ರಕರಣ: ದೆಹಲಿಯ ಇಡಿ ಕಚೇರಿಗೆ ಹಾಜರಾದ ಡಿಕೆಶಿ

DKS
Published on

ದೆಹಲಿ: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ದೆಹಲಿಯ ಜಾರಿ ನಿರ್ದೇಶನಾಲಯ(ಇಡಿ) ಕಚೇರಿಗೆ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹಾಜರಾಗಿದ್ದಾರೆ.

ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದ ಇಡಿ ಈಗಾಗಲೇ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ನ್ಯಾಯಾಲಯದಲ್ಲಿ ಇದರ ವಿಚಾರಣೆ ಕೂಡ ಪ್ರಗತಿಯಲ್ಲಿದೆ. ಈ ನಡುವೆ ಜಾರಿ ನಿರ್ದೇಶನಾಲಯ ಹೆಚ್ಚುವರಿ ಎಫ್​​ಐಆರ್​ ಅನ್ನು ದಾಖಲಿಸಿದ್ದು, ಅದಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿತ್ತು. ಈ ಹಿನ್ನೆಲೆಯಲ್ಲಿ ಶಿವಕುಮಾರ್​ ಭಾನುವಾರ ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಿದ ಡಿಕೆಶಿ, ಸೋಮವಾರ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆಯ ಸಿದ್ಧತೆ ಹಾಗೂ ವಿಧಾನಮಂಡಲ ಅಧಿವೇಶನದ ನಡುವೆಯೇ ಡಿಕೆಶಿ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ಇವರ ಜತೆ ಕುಣಿಗಲ್​ ಶಾಸಕ ಡಾ.ರಂಗನಾಥ್​ ಕೂಡ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net