

ಬೆಂಗಳೂರು : ಹಣಕಾಸಿನ ಸಮಸ್ಯೆಯಿಂದ ಬೇಸತ್ತು ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ ಧೈರ್ಯ ಸಾಲದೆ ಸಾವಿನ ನಿರ್ಧಾರ ಕೈಬಿಟ್ಟು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಕುಂದಲಹಳ್ಳಿ ನಿವಾಸಿ ಸರಿತಾ (35) ಕೊಲೆಯಾದ ಮಹಿಳೆ. ಹತ್ಯೆ ಬಳಿಕ ಪೊಲೀಸರಿಗೆ ಮೃತಳ ಪತಿ ತಾರಾನಾಥ್ ಶರಣಾಗಿದ್ದಾನೆ. ಆರ್ಥಿಕ ಸಂಕಷ್ಟದಿಂದ ಜಿಗುಪ್ಸೆಗೊಂಡು ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಕೊನೆಗೆ ಆತ್ಮಹತ್ಯೆ ನಿರ್ಧಾರ ಕೈಬಿಟ್ಟು ಪೊಲೀಸರಿಗೆ ಆರೋಪಿ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರು ಮೂಲದ ತಾರಾನಾಥ್ ಮತ್ತು ಸರಿತಾ 11 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಕುಂದಲಹಳ್ಳಿಯಲ್ಲಿ ನೆಲೆಸಿದ್ದರು. ಈ ದಂಪತಿಗೆ ಸಂತಾನ ಇರಲಿಲ್ಲ. ಪಾನಿಪೂರಿ ಅಂಗಡಿ ಇಟ್ಟಿದ್ದ ತಾರಾನಾಥ್, ಇತ್ತೀಚಿಗೆ ಆರ್ಥಿಕ ಸಂಕಷ್ಟ ಎದುರಾಗಿ ಸ್ನೇಹಿತರು ಮತ್ತು ಪರಿಚಯಸ್ಥರಿಂದ ಕೈ ಸಾಲ ಪಡೆದಿದ್ದ. ಸಕಾಲಕ್ಕೆ ಸಾಲ ಮರಳಿಸಲು ಆಗದ ಕಾರಣ ಸಾಲಗಾರರ ಕಾಟ ಶುರುವಾಗಿತ್ತು.
ಹಣಕಾಸಿನ ಸಮಸ್ಯೆಯಿಂದ ನೊಂದ ತಾರಾನಾಥ್, ಸತ್ತರೆ ತನ್ನ ಪತ್ನಿ ಅನಾಥವಾಗುತ್ತಾಳೆ. ಆಕೆಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ. ಶನಿವಾರ ರಾತ್ರಿ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಆನಂತರ ಮಂಗಳೂರಿಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳಲು ತಾರಾನಾಥ್ ಮುಂದಾಗಿದ್ದಾನೆ.
ಕೊನೆ ಕ್ಷಣದಲ್ಲಿ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದು ಮನೆ ಮಾಲಿಕರಿಗೆ ಭಾನುವಾರ ಮಧ್ಯಾಹ್ನ ಕರೆ ಮಾಡಿ ಕೊಲೆ ವಿಚಾರ ತಿಳಿಸಿದ್ದಾನೆ. ಈ ಬಗ್ಗೆ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮರು ದಿನ ತನ್ನ ಮನೆ ಮಾಲೀಕರ ಜತೆ ತೆರಳಿ ಪೊಲೀಸರಿಗೆ ತಾರಾನಾಥ ಶರಣಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.