

ಬೆಂಗಳೂರು: ಪತ್ನಿಯ ನಡತೆಯ ಬಗ್ಗೆ ಶಂಕಿ ವ್ಯಕ್ತಪಡಿಸಿದ ಪತಿ, ಪತ್ನಿಗೆ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಮಾರಕಾಸದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜೀವನ್ ಭೀಮಾ ನಗರದ ಮುರುಗೇಶ್ ಪಾಳ್ಯದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಆರ್.ಟಿ ನಗರದ ನಿಗರ್ (೨೮) ಗಂಭೀರವಾಗಿ ಗಾಯಗೊಂಡಿದ್ದು, ಪತಿ ಶೇಖ್ ಮುಜಿಬರ್(೩೫)ನನ್ನು ಜೀವನ್ ಭೀಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶೇಖ್ ಮುಜಿಬರ್-ನಿಗರ್ ದಂಪತಿ ಕಳೆದ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆರ್.ಟಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಚಾಲಕ ವೃತ್ತಿ ಮಾಡುತ್ತಿದ್ದ ಶೇಖ್ ಮುಜಿಬರ್ ಪತ್ನಿಯ ನಡತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ, ಇದರಿಂದ ಮನನೊಂದಿದ್ದ ನಿಗರ್ ಕಳೆದ ೩ ತಿಂಗಳ ಹಿಂದೆ ಗಂಡನಿಂದ ದೂರವಾಗಿ ಜೆ.ಬಿ ನಗರದ ಪಿ.ಜಿ ಯಲ್ಲಿ ಉಳಿದುಕೊಂಡಿದ್ದಳು. ಜತೆಗೆ ಊಬರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ತನ್ನ ಪತ್ನಿಗೆ ಮತ್ತೊಬ್ಬನ ಜತೆ ಸಂಬಂಧವಿದೆ ಎಂದು ಅನುಮಾನ ವ್ಯಕ್ತಪಡಿಸಿದ ಶೇಖ್ ಮುಜಿಬರ್ ಪತ್ನಿ ಉಳಿದುಕೊಂಡಿದ್ದ ಪಿಜಿಯ ಬಳಿ ಬಂದು ಆಕೆಗಾಗಿ ಕಾದು ಕುಳಿತು ಸೋಮವಾರ ಸಂಜೆ ೭ ಗಂಟೆಯ ಸಮಯದಲ್ಲಿ ಪತ್ನಿ ಪಿಜಿ ಬಳಿ ಬರುತ್ತಿದಂತೆ ಮಾರಕಾಸದಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈ ಬೆರಳುಗಳನ್ನು ಕತ್ತರಿಸಲು ನಿರ್ಧರಿಸಿದ್ದ:
ತನ್ನಿಂದ ದೂರವಾಗಿದ್ದ ಪತ್ನಿಯ ಮೇಲೆ ಆಕ್ರೋಶಗೊಂಡಿದ್ದ ಶೇಖ್ ಮುಜಿಬರ್ ಅವಳ ಕೈ ಬೆರಳುಗಳನ್ನು ಕತ್ತರಿಸಲು ನಿರ್ಧರಿಸಿದ. ಏಕೆಂದರೆ ನಾನು ದುಡಿಯುತ್ತಿದ್ದೇನೆ ನನ್ನ ಸಂಪಾದನೆಯಲ್ಲಿ ಬದುಕುತ್ತಿದ್ದೇನೆ ಎಂದು ಪತ್ನಿ ಹೇಳುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಅವಳ ಕೈ ಬೆರಳುಗಳನ್ನು ಕತ್ತರಿಸಿದರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಆಗ ನಾನು ಹೇಳಿದಂತೆ ಕೇಳಿಕೊಂಡು ಮನೆಯಲ್ಲಿ ಬಿದ್ದಿರುತ್ತಾಳೆ ಎಂದು ಯೋಚಿಸಿ ಹಲ್ಲೆ ಮಾಡಲು ಮುಂದಾಗಿದ್ದ ಆದರೆ ಕೈ ಬೆರಳುಗಳಿಗೆ ಹಲ್ಲೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೋಪದಲ್ಲಿ ಮಾರಕಾಸದಿಂದ ಕೈ ತಲೆ ಹಾಗೂ ದೇಹದ ೨೦ ಕ್ಕೂ ಹೆಚ್ಚು ಕಡೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿಗರ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುದ್ದಿ ತಿಳಿದು ಜೆ.ಬಿ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿ ಮುಜಿಬರ್‌ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ನಿಗರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಆದರೆ ದೇಹದ ಹಲವು ಭಾಗಗಳಿಗೆ ಗಂಭೀರವಾದ ಗಾಯಗಳಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.