ಗಿನ್ನೆಸ್ ದಾಖಲೆ ಸೇರಬೇಕಿದ್ದ ಬೆಳ್ಳಿ ಸಾವು: ಮೂರು ದಶಕ ಕಾಲ ಬದುಕಿತ್ತು ಈ ಹಸು

belli cow
Published on

ಹೊಸನಗರ: ಅತಿಹೆಚ್ಚು ವರ್ಷಗಳ ಕಾಲ ಜೀವಿಸುವ ಮೂಲಕ ಗಿನ್ನೆಸ್​ ದಾಖಲೆಗೆ ಸೇರ್ಪಡೆಯಾಗಲು ಅರ್ಹವಾಗಿದ್ದ ಮಲೆನಾಡು ಗಿಡ್ಡ ತಳಿಯ ಬೆಳ್ಳಿ ಹೆಸರಿನ ಹಸು ಶುಕ್ರವಾರ ಮೃತಪಟ್ಟಿದೆ.

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕಿ ಗ್ರಾಮದ ವಿಶ್ವೇಶ್ವರ ಹೆಗಡೆ ಅವರು ಸಾಕಿದ್ದ ಬೆಳ್ಳಿ ಶುಕ್ರವಾರ ರಾತ್ರಿ ಮೃತಪಟ್ಟಿದೆ. ಕಳೆದೆರಡು ದಿನದಿಂದ ಬೆಳ್ಳಿ ಅನಾರೋಗ್ಯದಿಂದ ಬಳಲುತ್ತಿತ್ತು. ಸಾಮಾನ್ಯವಾಗಿ ಮಲೆನಾಡು ಗಿಡ್ಡ ತಳಿಯ ಜಾನುವಾರುಗಳ ಜೀವಿತಾವಧಿ 22 ವರ್ಷ. ಆದರೆ ಬೆಳ್ಳಿ ಮೂರು ದಶಕಗಳ ಕಾಲ(33 ವರ್ಷ) ಜೀವಿಸಿತ್ತು. ಹೀಗಾಗಿ ಬೆಳ್ಳಿಯನ್ನು ಗಿನ್ನೆಸ್​ ದಾಖಲೆಗೆ ಸೇರ್ಪಡೆ ಮಾಡಲು ವಿಶ್ವೇಶ್ವರ ಹೆಗಡೆ ಅವರ ಪುತ್ರ ಭರತ್​ ಪ್ರಯತ್ನಿಸುತ್ತಿದ್ದರು.

ಅದಕ್ಕೆ ಸಂಬಂಧಪಟ್ಟಂತೆ ಹೊಸನಗರ ತಾಲೂಕು ಪಶು ಸಂಗೋಪನಾ ಇಲಾಖೆಯಿಂದ ಹಸುವಿನ ಹಾರ್ನ್​ ರಿಂಗ್ಸ್​, ಡೆಂಟೇಷನ್​ ಮತ್ತು ದೈಹಿಕ ಸಮತೋಲನ ಪರೀಕ್ಷಿಸಲಾಗಿತ್ತು. ಅದರ ಪ್ರಕಾರ ಬೆಳ್ಳಿಗೆ 25ಕ್ಕೂ ಹೆಚ್ಚಿನ ವರ್ಷವಾಗಿದೆ ಎಂದು ಪ್ರಮಾಣಪತ್ರ ನೀಡಲಾಗಿತ್ತು. ಆದರೂ ಬೆಳ್ಳಿಯ ನಿಖರ ವಯಸ್ಸು ತಿಳಿಯಲು ಬೆಂಗಳೂರಿನ ವನ್ಯಜಿವಿ ಅಧ್ಯಯನ ಕೇಂದ್ರ ಸಂಪರ್ಕಿಸಲು ಭರತ್​ ಮುಂದಾಗಿದ್ದರು. ಅಷ್ಟರೊಳಗೆ ಬೆಳ್ಳಿ ಸಾವನ್ನಪ್ಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net