ಒಳಗೆ ಬಿಡದಿದ್ದಕ್ಕೆ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ: ಕಲ್ಯಾಣ್​ ಕ್ಲಿನಿಕ್​ನಲ್ಲೊಂದು ಭಯಾನಕ ದೃಶ್ಯ! Kalyan Clinic

Arrest
Published on

Kalyan Clinic: ಕಲ್ಯಾಣ್​​ ಕ್ಲಿನಿಕ್​ನಲ್ಲೊಂದು ಭಯಾನಕ ಘಟನೆ ಸಂಭವಿಸಿದೆ. ಮಧ್ಯ ಸೇವಿಸಿದ ವ್ಯಕ್ತಿಯೊಬ್ಬ ಸೋಮವಾರ ಸಂಜೆ (ಜುಲೈ 21) ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಯನ್ನು ಗೋಪಾಲ್ ಝಾ ಎಂದು ಗುರುತಿಸಲಾಗಿದೆ. ವೈದ್ಯರು ಮತ್ತೊಂದು ರೋಗಿಯನ್ನು ಪರೀಕ್ಷೆ ಮಾಡುತ್ತಿರುವ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ಗೋಪಾಲ್​ನನ್ನು ಒಳಗೆ ಬಿಡಲಿಲ್ಲ. ಇದರಿಂದ ಆಕ್ರೋಶಗೊಂಡ ಈತ, ಮಹಿಳಾ ಸಿಬ್ಬಂದಿಯ ಕೂದಲುಗಳನ್ನು ಎಳೆದು, ಕಾಲಿನಿಂದ ಒದ್ದು, ಪದೇಪದೆ ಹಲ್ಲೆ ನಡೆಸಿರುವ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಾಯಗೊಂಡ ಮಹಿಳಾ ಸಿಬ್ಬಂದಿಯನ್ನು ಪ್ರಸ್ತುತ ಜಾನಕಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಕುತ್ತಿಗೆ, ಎದೆ ಹಾಗೂ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಈ ಗಾಯಗಳಿಂದ ಆಕೆ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಇದ್ದು, ಗಾಯಾಳು ಬಗ್ಗೆ ನಿಗಾ ವಹಿಸಲಾಗಿದೆ ಎಂದು ಡಾ.ಮೊಯಿನ್ ಶೇಖ್ ತಿಳಿಸಿದ್ದಾರೆ.

ಆರೋಪಿ ಗೋಪಾಲ್ ಝಾನನ್ನು ಅಂಬರ್​ನಾಥ್​ನ ನೆವಾಲಿ ಪ್ರದೇಶದಿಂದ ಬಂಧಿಸಿ, ಮನ್ಪಾಡಾ ಪೊಲೀಸ್​ ಠಾಣೆಗೆ ಕರೆತರುವಲ್ಲಿ ಎಂಎನ್‌ಎಸ್ ಉಪ ಮೇಯರ್ ಯೋಗೇಶ್ ಗವಾನ್ಹೆ ಮತ್ತು ದೀಪಕ್ ಕರಂಡೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಇತ್ತ ಗೋಪಾಲ್​ನ ಸಹೋದರ ರಂಜಿತ್​ ಝಾನನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನು ಗೋಪಾಲ್​ ಕಳ್ಳತನ, ದರೋಡೆ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿ. ಈಗಾಗಲೇ ಕಲ್ಯಾಣ್‌ನ ಕೊಲ್ಶೆವಾಡಿ ಉಲ್ಲಾಸ್‌ನಗರ ಪ್ರದೇಶಗಳಲ್ಲಿ ಆತನ ವಿರುದ್ಧ ಬೇರೆ ಬೇರೆ ಪ್ರಕರಣಗಳು ದಾಖಲಾಗಿದ್ದವು. ಹಾಗೇ ಈತ ಸ್ಥಳೀಯ ವ್ಯಾಪಾರಿಗಳಿಂದ ಹಣ ಪಡೆಯುತ್ತಿದ್ದ ಎಂಬ ಆರೋಪದ ಮೇರೆಗೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಖಚಿತ ಮಾಹಿತಿ ಪಡೆದುಕೊಳ್ಳಲಾಗುತ್ತದೆ ಎಂದು ಪೊಲೀಸ್ ಉಪ ಆಯುಕ್ತ ಅತುಲ್ ಝೆಂಡೆ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net