

ಬೆಂಗಳೂರು: ಪುಸ್ತಕ ದಿನವನ್ನು ‘ಮಸ್ತಕ ದಿನ’ವೆಂದು ಅರ್ಥಪೂರ್ಣವಾಗಿ ಆಚರಿಸಲು ಜನರಲ್ಲಿ ಪುಸ್ತಕದ ಬಗ್ಗೆ ಅಭಿಮಾನ ಹೆಚ್ಚಿಸಿ, ಓದುವ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವ ಕನ್ನಡ ಪುಸ್ತಕ ಪ್ರಾಧಿಕಾರವು ಮನ-ಮನೆಗೆ ಪುಸ್ತಕ ಸಂಸ್ಕೃತಿ ಪ್ರಸರಣ ಶೀರ್ಷಿಕೆಯಡಿ ‘ಮನೆಗೊಂದು ಗ್ರಂಥಾಲಯ’ ಸೇರಿ ಹಲವು ಯೋಜನೆಗಳನ್ನು ರೂಪಿಸಿದೆ. ಪ್ರಾಧಿಕಾರದ ಉದ್ದೇಶಗಳು ಹಾಗೂ ಯೋಜನೆಗಳ ಕುರಿತು ‘ವಿಜಯವಾಣಿ’ ಸಂವಾದದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮೈಸೂರು ಮಾಹಿತಿ ಹಂಚಿಕೊಂಡಿದ್ದಾರೆ.
ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ, ಪುಸ್ತಕ ಓದಬೇಕು ಎಂದು ವೇದಿಕೆಗಳಲ್ಲಿ ಭಾಷಣ ಮಾಡುವುದರಿಂದ ಪ್ರಯೋಜನವಿಲ್ಲ. ಬದಲಿಗೆ ಜನರು ಪುಸ್ತಕ ಕೊಂಡು ಓದುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಆಗ ಓದುಗರ ಸಂಖ್ಯೆಯೂ ಹೆಚ್ಚುವುದಲ್ಲದೆ, ಲೇಖಕರು, ಪ್ರಕಾಶಕರು ಹಾಗೂ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವಿವಿಧ ವಿಭಾಗದವರ ಬದುಕು ಕೂಡ ಗಟ್ಟಿಗೊಳ್ಳುತ್ತದೆ ಎಂದರು. ‘ಮನೆಗೊಂದು ಗ್ರಂಥಾಲಯ’ ಯೋಜನೆ ಹಾಕಿಕೊಳ್ಳಲಾಗಿದ್ದು, ಮುಖ್ಯಮಂತ್ರಿಗಳ ನಿವಾಸದಿಂದ ಯೋಜನೆಗೆ ಚಾಲನೆ ನೀಡಲಾಗುವುದು. ಯಾವುದೇ ವಿಚಾರವನ್ನು ಜನರಿಗೆ ನೀವು ಮಾಡಿ ಎಂದು ಹೇಳುವ ಮುನ್ನ ಜನಪ್ರತಿನಿಧಿಗಳು, ಸೆಲೆಬ್ರೆಟಿಗಳ ಮೂಲಕ ಮಾಡಿಸಿ, ಅವರ ಮೂಲಕ ಸಂದೇಶ ರವಾನಿಸಿದರೆ ಜನರು ಅದನ್ನು ಅನುಸರಿಸುತ್ತಾರೆ. ಹಾಗಾಗಿ ಮುಖ್ಯಮಂತ್ರಿ ಆದಿಯಾಗಿ ರಾಜ್ಯದ ಹಾಲಿ ಹಾಗೂ ಮಾಜಿ ಸಂಸದರು, ಸಚಿವರು, ಶಾಸಕರು, ಚಲನಚಿತ್ರ ನಟ-ನಟಿಯರ ಮನೆಗಳಲ್ಲಿ ಗ್ರಂಥಾಲಯ ಆರಂಭಿಸಿ ಅವರಿಂದಲೇ ಸಂದೇಶ ಕೊಡಿಸುವ ಮೂಲಕ ಒಂದು ಲಕ್ಷ ಮನೆಯನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಯಾರೆಲ್ಲ ಮನೆಯಲ್ಲಿ ಗ್ರಂಥಾಲಯ ತೆರೆಯಲು ಮುಂದೆ ಬರುತ್ತಾರೋ ಅಂತಹವರ ಮನೆಯ ಗ್ರಂಥಾಲಯ ಉದ್ಘಾಟಿಸಲು ಅವರ ನೆಚ್ಚಿನ ಸಾಹಿತಿಗಳನ್ನು ಮನೆಗೇ ಕರೆದುಕೊಂಡು ಹೋಗಿ ಅವರಿಂದಲೇ ಚಾಲನೆ ಕೊಡಿಸಲಾಗುವುದು. ಈ ವೇಳೆ ಅವರೊಂದಿಗೆ ಮಾತುಕತೆ, ಸಂವಾದ ನಡೆಸಿ ಜತೆಗೆ ಒಂದು ಚಹಾ ಕೂಟಕ್ಕೆ ಅವಕಾಶ ಇರುತ್ತದೆ. ಹಾಗಾಗಿ ಮನೆಯಲ್ಲಿ ಒಂದು ಗ್ರಂಥಾಲಯ ಸ್ಥಾಪಿಸಿ, ಇಷ್ಟದ ಸಾಹಿತಿಯನ್ನು ಕರೆಸಿಕೊಂಡು ಅವರೊಂದಿಗೆ ಸಮಯ ಕಳೆಯಲು ಇದೊಂದು ಸುವರ್ಣಾವಕಾಶ ಎಂದರು.
ಜನರ ‘ಕೈ’ಗಳನ್ನು ಆವರಿಸಿರುವ ‘ಮೊಬೈಲ್’ ಜಾಗದಲ್ಲಿ ಪುಸ್ತಕಗಳನ್ನು ಅಲಂಕರಿಸುವ ಪ್ರಯತ್ನ ಇದಾ ಗಿದ್ದು, ಇದರಿಂದ ಮನೆ ಹಾಗೂ ಮನೆಯಲ್ಲಿ ಇರುವವರ ಘನತೆಯೂ ಹೆಚ್ಚಲಿದೆ. ಅವರ ಜ್ಞಾನವೂ ವೃದ್ಧಿಯಾಗಲಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯ ಜಾಗೃತಿ ಸಮಿತಿ ರಚಿಸಿ ಅದಕ್ಕೆ ಜಿಲ್ಲಾ ಸಂಚಾಲಕರನ್ನು ನೇಮಿಸಲಾಗುವುದು. ಅವರು ಮನೆಯಲ್ಲಿ ಗ್ರಂಥಾಲಯ ತೆರೆಯುವ ಹಾಗೂ ಅದರ ಮಹತ್ವ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಸಲಹೆ-ಸೂಚನೆ ನೀಡಲಿದ್ದಾರೆ. ಅಷ್ಟೇ ಅಲ್ಲದೆ, ಇಷ್ಟದ ಸಾಹಿತಿ ಇಲ್ಲವೆ, ಪ್ರಸಿದ್ಧ ಲೇಖಕರು ಅಥವಾ ಬರಹಗಾರರನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಕಥೆ, ಕಾವ್ಯ ವಾಚನ ನಡೆಸುವ ಮೂಲಕ ಸಾಹಿತ್ಯಿಕ ಚಟುವಟಿಕೆ ಕೇಂದ್ರವಾಗಿಸಲಿದ್ದಾರೆ ಎಂದು ತಿಳಿಸಿದರು.
ಪ್ರಾಧಿಕಾರದಿಂದ ಪ್ರತಿ ತಿಂಗಳು ಕನ್ನಡ ಭವನದಲ್ಲಿ ‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮ ಆಯೋಜಿಸಿ ಒಂದು ಪುಸ್ತಕ ಆಯ್ಕೆ ಮಾಡಿಕೊಂಡು ಅದರ ಕುರಿತು ಉಪನ್ಯಾಸ ನೀಡುವುದು, ಲೇಖಕರ ಪರಿಚಯ ಸೇರಿ ಪುಸ್ತಕದ ಸಮಗ್ರ ಪರಿಚಯ ಮಾಡಿಕೊಡುವ ಮೂಲಕ ಪುಸ್ತಕ ಮತ್ತು ಅದರ ಲೇಖಕರನ್ನು ಜನರಿಗೆ ಪರಿಚಯ ಮಾಡಿಕೊಡಲಾಗುವುದು ಎಂದು ಮಾನಸ ತಿಳಿಸಿದರು.
ಪುಸ್ತಕ ಸಂಸ್ಕೃತಿಯ ಪ್ರಸರಣ ಸಂಬಂಧ ಪ್ರಾಧಿಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಪುಸ್ತಕ ಮಾರಾಟದಿಂದ ಪ್ರಾಧಿಕಾರಕ್ಕೆ ಉತ್ತಮ ಲಾಭ ಬರುತ್ತಿದೆ. | ಡಾ. ಮಾನಸ ಮೈಸೂರು ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ
ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಮೂಡಿಸಲು ‘ನನ್ನ ಮೆಚ್ಚಿನ ಓದು’ ಎಂಬ ಯೋಜನೆ ಜಾರಿಯಲ್ಲಿದ್ದು, ಈ ಕಾರ್ಯಕ್ರಮದ ಮೂಲಕ ಶಾಲೆಗಳಲ್ಲಿ ಮಕ್ಕಳಿಗೆ ಅವರ ಮೆಚ್ಚಿನ ಪುಸ್ತಕ ಓದಿ ಅದರ ಕುರಿತು ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ಶಾಲೆಗಳಿಗೆ 5 ಸಾವಿರ ರೂ. ನೀಡಲಾಗುತ್ತಿದೆ. ಇದಲ್ಲದೆ ಗಡಿ ಭಾಗಗಳಲ್ಲೂ ಕನ್ನಡ ಪುಸ್ತಕ ಓದುವ ಸಂಸ್ಕೃತಿ ಬೆಳೆಸಲು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಹಾವಳಿ ನಡುವೆಯೂ ಪುಸ್ತಕೋದ್ಯಮವನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ‘ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ಜನರನ್ನು ಪ್ರೋತ್ಸಾಹಿಸಲು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಂದ ನಾಲ್ಕು ಪ್ರಶಸ್ತಿ ನೀಡಲಾಗುತ್ತದೆ. ಮೈಸೂರು ವಿಭಾಗದಲ್ಲಿ ‘ನಂಜನಗೂಡು ತಿರುಮಲಾಂಬ’, ಮಂಗಳೂರು ವಿಭಾಗದಲ್ಲಿ ‘ಹಾ.ಮ.ನಾಯಕ್’, ಬೆಂಗಳೂರು ವಿಭಾಗದಲ್ಲಿ ‘ಪಿ.ಆರ್. ತಿಪ್ಪೇಸ್ವಾಮಿ’ ಹಾಗೂ ಬೆಳಗಾವಿ ವಿಭಾಗದಲ್ಲಿ ‘ಗಳಗನಾಥ’ರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು. ಓದು ಸೇರಿ ಪುಸ್ತಕ ಸಂಸ್ಕೃತಿಗೆ ಪೂರಕವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಆಯ್ಕೆ ಮಾಡಿ ಪ್ರತಿ ವರ್ಷ ಈ ಪ್ರಶಸ್ತಿಯನ್ನು ಸಿಎಂರಿಂದ ಪ್ರದಾನ ಮಾಡಿಸಲಾಗುವುದು ಎಂದರು.
ಅಕಾಡೆಮಿ, ಪ್ರಾಧಿಕಾರ ಸೇರಿ ಸರ್ಕಾರದ ಎಲ್ಲ ಪ್ರಕಟಣೆಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದಿಂದಲೇ ಪ್ರಕಟಿಸುವ ಕುರಿತು ಸರ್ಕಾರದ ಜತೆ ಸಮಾಲೋಚಿಸುವುದಾಗಿ ಡಾ. ಮಾನಸ ಹೇಳಿದರು. ಒಂದು ಸೂರಿನಡಿ ಎಲ್ಲ ಪುಸ್ತಕಗಳು ಪ್ರಕಟಣೆಯಾದರೆ ಡುಪ್ಲಿಕೇಷನ್ ತಪ್ಪುತ್ತದೆ. ಏಕೀಕೃತ ವ್ಯವಸ್ಥೆ ಬಂದರೆ ಪ್ರಕಟಣೆಯಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತದೆ, ಪಾರದರ್ಶಕತೆ ಬರುತ್ತದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆದಿದೆ ಎಂದರು.