

ಬೆಂಗಳೂರು: ರಾಜ್ಯದಿಂದ ಮಧ್ಯಪ್ರದೇಶ ವಿಧಾನಸಭೆ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಗೃಹ ರಕ್ಷಕ ದಳ ಸಿಬ್ಬಂದಿಯೊಬ್ಬರು ವಾಪಸ್ ಬರುವಾಗ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸಿದ್ದು (35ಮೃತ ಗೃಹ ರಕ್ಷಕ ದಳ ಸಿಬ್ಬಂದಿ.
ಮಳವಳ್ಳಿಯಲ್ಲಿ 10ರ್ಷಗಳಿಂದ ಹೋಮ್ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿದ್ದು ಅವರನ್ನು ಇತ್ತೀಚೆಗೆ ನಡೆದ ಮಧ್ಯಪ್ರದೇಶ ಚುನಾವಣೆಗೆ ವಿಶೇಷ ಕರ್ತವ್ಯಕ್ಕಾಗಿ ನಿಯೋಜಿಸಲಾಗಿತ್ತು. ಹೀಗಾಗಿ ಕೆಲ ದಿನಗಳ ಹಿಂದೆ ಕರ್ತವ್ಯಕ್ಕೆ ತೆರಳಿದ್ದ ಸಿದ್ದು ಶುಕ್ರವಾರ ಸಹೋದ್ಯೋಗಿಗಳ ಜತೆ ರಾಜ್ಯಕ್ಕೆ ಆಗಮಿಸುತ್ತಿದ್ದರು. ಮಾರ್ಗ ಮಧ್ಯೆ ಸಿದ್ದುಗೆ ಹೊಟ್ಟೆ ನೋವು ಹೆಚ್ಚಾಗಿ, ನಾಲ್ಕೈದು ಬಾರಿ ವಾಂತಿ ಮತ್ತು ಬೇಧಿ ಮಾಡಿಕೊಂಡು, ತೀವ್ರ ಅಸ್ವಸ್ಥಗೊಂಡಿದ್ದು, ಶುಕ್ರವಾರ ಸಂಜೆ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆ ರೈಲಿನಲ್ಲೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಸಹೋದ್ಯೋಗಿಗಳು ರೈಲ್ವೆ ನಿಲ್ದಾಣದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಕೆಲ ಕ್ಷಣಗಳಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಳಿಕ ಗೃಹ ರಕ್ಷಕ ದಳದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿದ್ದು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಶನಿವಾರ ಮಧ್ಯಾಹ್ನದ ವೇಳೆಗೆ ಮರಣೋತ್ತರ ಪರೀಕ್ಷೆ ಮುಕ್ತಾಯಗೊಳಿಸಿ ಮೃತದೇಹವನ್ನು ಕುಟಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಗೃಹ ರಕ್ಷಕ ದಳ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಸಾವು:
ನ.17ಕ್ಕೆ ಮಧ್ಯ ಪ್ರದೇಶ ಚುನಾವಣೆ ಮುಕ್ತಾಯಗೊಂಡಿದೆ. ಆದರೆ, ರಾಜ್ಯಕ್ಕೆ ವಾಪಸ್ ಆಗಲು ಸರಿಯಾದ ವ್ಯವಸ್ಥೆ ಇಲ್ಲದೆ ಹೋಮ್ ಗಾರ್ಡ್‌ಗಳು ಪರದಾಡಿದ್ದಾರೆ. ಸರಿಯಾದ ಊಟ, ತಿಂಡಿ ಹಾಗೂ ಮಲಗಲು ಸೌಲಭ್ಯವಿಲ್ಲದೆ ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಸಿದ್ದು ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ರಕ್ಷಕ ದಳ ಮತ್ತು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಕಮಲ್ ಪಂತ್, ಹೋಮ್ ಗಾರ್ಡ್ ಸಿಬ್ಬಂದಿ ಸಿದ್ದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ ಎಂದರು.