

ಸ್ಮರ್ಧಾತ್ಮಕ ಪರೀಕ್ಷೆ ಗಳಿಗೆ ತಯಾರಿ ಮಾಡಿಕೊಳ್ಳ ಬೇಕಾದರೆ ಸಾಕಷ್ಟು ಶಿಸ್ತು ಮತ್ತು ಗಂಭೀರ ಅಧ್ಯಯನ ಬೇಕೇಬೇಕು. ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ಸಜ್ಜಾಗಲು ಅಭ್ಯರ್ಥಿಗಳು ಪ್ರಚಲಿತ ವಿದ್ಯಮಾನಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ, ಅರಿವು ಹೊಂದಿರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಉಪಯುಕ್ತ ಮಾಹಿತಿ ಒದಗಿಸುವ ಕೃತಿಯೇ ‘ಇಂದಿನ ಕರ್ನಾಟಕ’. ವಾಣಿಜ್ಯ ತೆರಿಗೆಗಳ ಉಪ ಆಯುಕ್ತರಾಗಿದ್ದ, ಪ್ರಸ್ತುತ ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆಯಲ್ಲಿ ಉಪ ಆಯುಕ್ತರಾಗಿರುವ ಮಹಮ್ಮದ್ ರಫೀ ಪಾಶ ಮತ್ತು ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ. ಆರ್. ಶಂಕರಪ್ಪ ಅವರು ಜಂಟಿಯಾಗಿ ರಚಿಸಿರುವ ಈ ಪುಸ್ತಕವು ಮಾಹಿತಿಗಳ ಭಂಡಾರವೇ ಆಗಿದೆ.
ಮಹಮ್ಮದ್ ರಫೀ ಪಾಶ ಅವರು ಕಳೆದ 15 ವರ್ಷಗಳಿಂದ ಐಎಎಸ್, ಕೆಎಎಸ್ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅದರಲ್ಲೂ, ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಮಹಮ್ಮದ್ ರಫೀ ಪಾಶಾ ಅವರು ಸಿದ್ಧಪಡಿಸಿರುವ ಪುಸ್ತಕಗಳು ತುಂಬ ಉಪಯುಕ್ತವಾಗಿವೆ. ಇವರ ಯಶೋಮಾರ್ಗ-ಐ.ಎ.ಎಸ್/ಕೆ.ಎ.ಎಸ್ ಮುಖ್ಯ ಪರೀಕ್ಷೆಯ ಕೈಪಿಡಿ’ ಎಂಬ ಸಂಪುಟವನ್ನೂ ಸಪ್ನಾ ಬುಕ್ ಹೌಸ್ ಪ್ರಕಟಿಸಿದೆ. ‘ಇಂದಿನ ಕರ್ನಾಟಕ’ ಕೃತಿಯು ಒಟ್ಟು 15 ಅಧ್ಯಾಯಗಳನ್ನು ಒಳಗೊಂಡಿದೆ. ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’, ‘ಕರ್ನಾಟಕ ವಿಧಾನಸಭೆಯ ಭವ್ಯ ಇತಿಹಾಸ’, ‘ಮೇಲ್ಮನೆ ಎಂಬ ಅನುಭವ ಮಂಟಪ- ವಿಧಾನ ಪರಿಷತ್ತು’, ‘ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ’, ‘ಚುನಾವಣೆ ಸುಧಾರಣೆಗಳು’, ‘ಒಂದು ರಾಜ್ಯ ಹಲವು ಜಗತ್ತು (ಪ್ರವಾಸೋದ್ಯಮ)’ ಅಧ್ಯಾಯಗಳಂತೂ ಅಭ್ಯರ್ಥಿಗಳಿಗೆ ಇತಿಹಾಸ ಮತ್ತು ವರ್ತಮಾನವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ. ಶಾಸಕಾಂಗ ವ್ಯವಸ್ಥೆಯ ಕಾರ್ಯಾಚರಣೆ ಹಾಗೂ ಅದರ ವೈಶಿಷ್ಟ್ಯದ ಹಲವು ಆಯಾಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಕನ್ನಡಿಗ ಅಭ್ಯರ್ಥಿಗಳು ಹೆಚ್ಚೆಚ್ಚು ಸಂಖ್ಯೆಯಲ್ಲಿ ಐಎಎಸ್, ಕೆಎಎಸ್ ಪರೀಕ್ಷೆ ಬರೆಯಬೇಕು, ಹೆಚ್ಚಿನ ಯುವ ಅಭ್ಯರ್ಥಿಗಳು ಉನ್ನತ ಹುದ್ದೆಗಳಿಗೆ ಆಯ್ಕೆಯಾಗಬೇಕು ಎಂಬ ಕಳಕಳಿಯೇ ಈ ಕೃತಿಯನ್ನು ಹೊರತರಲು ಪ್ರಮುಖ ಕಾರಣ. ಇತರ ರಾಜ್ಯಗಳಲ್ಲಿ ಸ್ಮರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಇರುವ ಪ್ರೋತ್ಸಾಹ ಕರ್ನಾಟಕದಲ್ಲಿಯೂ ಸಿಗಬೇಕಿದೆ. ಈ ನಿಟ್ಟಿನಲ್ಲಿ ಪೂರಕ ವಾತಾವರಣ ಸೃಷ್ಟಿಸಲು ಪ್ರಯತ್ನಗಳು ಹೆಚ್ಚಬೇಕಿದೆ ಎಂದು ಆಶಯ ವ್ಯಕ್ತಪಡಿಸಿರುವ ಲೇಖಕರು ಈ ಮೂಲಕ ಯುವಕರಿಗೆ ಹುರಿದುಂಬಿಸುವ ಕೆಲಸವನ್ನೂ ಮಾಡಿದ್ದಾರೆ.
ಕರ್ನಾಟಕದ ಪ್ರಸಕ್ತ ಬೆಳವಣಿಗೆಗಳು, ಕೃಷಿ ಮತ್ತು ಅದಕ್ಕೆ ಸಂಬಂಧಪಟ್ಟ ಆರ್ಥಿಕತೆ, ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು ಮತ್ತು ಅವು ಬೀರಿರುವ ಪರಿಣಾಮ, ಹೊಸ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ತೆರೆದುಕೊಳ್ಳಲು ಇರುವ ಹೊಸ ಸಾಧ್ಯತೆ, ಇಲ್ಲಿಯ ಸಂಸ್ಕೃತಿಯ ವೈಶಿಷ್ಟ್ಯ, ಆ ದಾರಿಯಲ್ಲಿ ಸಾಗುವ ಅಗತ್ಯತೆ ಸೇರಿದಂತೆ ಹಲವು ಆಸಕ್ತಿಕರ ಅಂಶಗಳ ಬಗ್ಗೆ ವಿವರಿಸಿರುವ ಈ ಪುಸ್ತಕ, ಒಂದೇ ಕಡೆ ಮಹತ್ವದ ಮಾಹಿತಿಯನ್ನು ಒಳಗೊಂಡಿರುವುದರಿಂದ ಪರೀಕ್ಷಾರ್ಥಿಗಳ ಅಧ್ಯಯನಕ್ಕೆ ತುಂಬ ಅನುಕೂಲಕರವಾಗಿದೆ. ಸರಳವಾದ ಭಾಷೆಯಲ್ಲಿ ನಿರುಪಣೆ ಇರುವುದರಿಂದ ಬೇಗನೆ ಆಪ್ತವಾಗಿ, ಓದಿನ ಉತ್ಸಾಹ ಮೂಡಿಸುತ್ತದೆ.