

ಬೆಂಗಳೂರು: ಮಧ್ಯಪ್ರದೇಶದ ಹೈ ಪ್ರೊಫೈಲ್ ಹನಿಟ್ರ್ಯಾಪ್ ಪ್ರಕರಣದ ಮಾಸ್ಟರ್‌ಮೈಂಡ್ ನಗರದಲ್ಲಿ ಕಳ್ಳತನ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾಳೆ.
ಮಧ್ಯಪ್ರದೇಶದ ಇಂದೂರ್ ಮೂಲದ ಆರತಿ ದಯಾಳ್ ಬಂಧಿತೆ. ಮಧ್ಯಪ್ರದೇಶದಲ್ಲಿ ನಡೆದಿದ್ದ ಹನಿಟ್ರ್ಯಾಪ್ ಪ್ರಕರಣದಲ್ಲಿ 2019ರಲ್ಲಿ ಆರತಿ ದಯಾಳ್ ಜೈಲು ಸೇರಿ 2020ರಲ್ಲಿ ಜಾಮೀನು ಪಡೆದು ಹೊರಬಂದು ನಾಪತ್ತೆಯಾಗಿದ್ದಳು. ಕೋರ್ಟ್ ವಿಚಾರಣೆಗೆ ಹಾಜರಾಗದೆ ಆಂಧಪ್ರದೇಶದ ವಿಜಯವಾಡ ಮತ್ತು ಬೆಂಗಳೂರಿನಲ್ಲಿ ಸೋನು, ಸಮಂತಾ ವಿವಿಧ ಹೆಸರುಗಳು ಹೇಳಿಕೊಂಡು ಜೀವನ ನಡೆಸುತ್ತಿದ್ದಳು.
ಇತ್ತೀಚೆಗೆ ಮಹದೇವಪುರದಲ್ಲಿನ ಸ್ಪಾದಲ್ಲಿ ಕೆಲಸ ಮಾಡಿಕೊಂಡು ಪೇಯಿಂಗ್ ಗೆಸ್ಟ್‌ನಲ್ಲಿ ನೆಲೆಸಿದ್ದಳು. ಜೊತೆಯಲ್ಲಿ ಇದ್ದವರ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದಳು. ಈ ಬಗ್ಗೆ ಆ.30ರಂದು ಯುವತಿಯರು, ಮಹದೇವರಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಆರತಿ ದಯಾಳ್‌ನನ್ನು ವಿಜಯವಾಡದಲ್ಲಿ ಬಂಧಿಸಿದ್ದಾರೆ. ಇದಕ್ಕೂ ಮೊದಲು ಆಂಧ್ರಪ್ರದೇಶದಲ್ಲೂ ಸಹ ಪೇಯಿಂಗ್ ಗೆಸ್ಟ್‌ನಲ್ಲಿ ಕಳ್ಳತನ ಮಾಡಿ ಸ್ಥಳೀಯ ಪೊಲೀಸರಿಗೆ ಸೆರೆಸಿಕ್ಕಿದ್ದಳು ಎಂದು ತಿಳಿದುಬಂದಿದೆ.
ಬಂಧನದ ವಿಷಯ ತಿಳಿದ ಮಧ್ಯಪ್ರದೇಶದಿಂದ ಈಕೆಯ ಪರ ವಕೀಲರು ಕರೆ ಮಾಡಿ ವಕಾಲತ್ತು ವಹಿಸುತ್ತಿದ್ದರು. ಅನುಮಾನ ಬಂದು ಪೂರ್ವಪರ ಪರಿಶೀಲನೆ ನಡೆಸಿದಾಗ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಮಧ್ಯಪ್ರದೇಶದಲ್ಲಿ ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿದ್ದ ಆರತಿ ದಯಾಳ್, ಬಡ ಕುಟುಂಬದ ಕಾಲೇಜು ಯುವತಿಯರಿಗೆ ಐಷಾರಾಮಿ ಜೀವನ ಪರಿಚಯಿಸಿ ದಂಧೆಗೆ ಬಳಸಿಕೊಳ್ಳುತ್ತಿದ್ದರು.
ರಾಜಕಾರಣಿ, ಅಧಿಕಾರಿಗಳಿಗೆ ಯುವತಿಯರನ್ನು ಒದಗಿಸಿ ತನ್ನ ಗಾಳಕ್ಕೆ ಬೀಳೀಸಿಕೊಳ್ಳುತ್ತಿದ್ದಳು. ಇದಕ್ಕಾಗಿ 40 ವೇಶ್ಯೆಯರನ್ನು ಬಾಡಿಗೆ ಆಧಾರದಲ್ಲಿ ಇಟ್ಟುಕೊಂಡಿದ್ದಳು. ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಸಂಪರ್ಕ ಹೊಂದಿದ್ದ ಆರತಿ ದಯಾಳ್, ಬ್ಲ್ಯಾಕ್‌ಮೇಲ್ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸಿದಾಗ ಅಶ್ಲೀಲ ವಿಡಿಯೋ, ಸಂದೇಶಗಳು ಪತ್ತೆಯಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹದೇವಪುರ ಪೊಲೀಸರು, ಮಧ್ಯಪ್ರದೇಶ ಪೊಲೀಸರೊಂದಿಗೆ ಸಮನ್ವಯತೆ ಸಾಧಿಸಿ ಮುಂದಿನ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.