

ಬೇಲೂರು: ತಾಲೂಕಿನ ಮಲೆನಾಡು ಭಾಗದ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಉಪಟಳದಿಂದ ತೋಟ, ಗದ್ದೆಗಳ ಬೆಳೆ ನಾಶವಾಗುತಿದ್ದು, ಇನ್ನಷ್ಟು ನಾಶವಾಗುವ ಅಥವಾ ಯಾವುದೇ ಅವಘಡ ಸಂಭವಿಸುವ ಮುನ್ನ ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕಾಡಾನೆಗಳನ್ನು ಶಾಶ್ವತವಾಗಿ ಓಡಿಸಲು ಮುಂದಾಗಬೇಕೆಂದು ಕಣಗುಪ್ಪೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಲೂಕಿನ ಮಲೆನಾಡು ಭಾಗದ ಸಾಕಷ್ಟು ಗ್ರಾಮಗಳಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿವೆ. ಇಪ್ಪತ್ತಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ಕಣಗುಪ್ಪೆ ಗ್ರಾಮದ ಆಸುಪಾಸಿನಲ್ಲಿರುವ ಗ್ರಾಮಗಳಲ್ಲೇ ಕೆಲ ದಿನಗಳಿಂದ ಬೀಡು ಬಿಟ್ಟಿದ್ದು, ಗುರುವಾರ ರಾತ್ರಿ ಕಣಗುಪ್ಪೆ ಗ್ರಾಮದ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕುಮಾರ್ ಕಣಗುಪ್ಪೆ ಅವರ ತೋಟದಲ್ಲಿ ಅಳವಡಿಸಿರುವ ತಂತಿ ಬೇಲಿ ಕಿತ್ತು ಹಾಕಿ ಒಳನುಗ್ಗಿರುವ ಕಾಡಾನೆಗಳು, ಅಪಾರ ಪ್ರಮಾಣದ ಅಡಕೆ, ಕಾಫಿ, ಬಾಳೆ ಸೇರಿದಂತೆ ಇತರ ಬೆಳೆಗಳನ್ನು ಧ್ವಂಸಗೊಳಿಸಿ ನಷ್ಟ ಮಾಡಿವೆ.
ಅಲ್ಲದೆ ಇದೇ ಆನೆಗಳು ಇಲ್ಲಿಂದ ಮತ್ತೆ ಅಕ್ಕಪಕ್ಕದ ತೋಟಗಳಿಗೂ ನುಗ್ಗಿ ಎಲ್ಲೆಂದರಲ್ಲಿ ಓಡಾಡಿ ಸಾಕಷ್ಟು ಬೆಳೆ ನಾಶಪಡಿಸಿ ರೈತರು, ಕೂಲಿ ಕಾರ್ಮಿಕರು ಹಾಗೂ ಬೆಳೆಗಾರರನ್ನು ಕಂಗೆಡಿಸಿವೆ. ಕಾಡಾನೆಗಳಿಂದ ಯಾವುದೇ ಅವಘಡ ಸಂಭವಿಸುವ ಮುನ್ನವೇ ಕಣಗುಪ್ಪೆ ಸೇರಿದಂತೆ ತಾಲೂಕಿನಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಶಾಶ್ವತವಾಗಿ ದೂರದ ಕಾಡಿಗಟ್ಟುವ ಕೆಲಸಕ್ಕೆ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಜತೆಗೆ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿಯೂ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕೆಂದು ಗ್ರಾಮಸ್ಥರು, ಬೆಳೆಗಾರು ಆಗ್ರಹಿಸಿದ್ದಾರೆ.
ಕಣಗುಪ್ಪೆ ಗ್ರಾಮದ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕುಮಾರ್ ಮಾತನಾಡಿ, ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿ ಅಡಕೆ, ಕಾಫಿ, ಬಾಳೆ ಸೇರಿದಂತೆ ಇನ್ನಿತರ ಗಿಡಗಳನ್ನು ನೆಟ್ಟು ಪೋಷಿಸಿದ್ದೇವೆ. ಈಗಾಗಲೇ ಫಸಲು ಬಿಡುತ್ತಿರುವ ಮತ್ತು ಕೆಲವು ಫಸಲಿನ ಹಂತಕ್ಕೆ ಬಂದಿರುವ ಅಡಕೆ ಗಿಡಗಳನ್ನು 20ಕ್ಕೂ ಹೆಚ್ಚಿರುವ ಕಾಡಾನೆಗಳ ಹಿಂಡು ಗುರುವಾರ ರಾತ್ರಿ ನುಗ್ಗಿ ಧ್ವಂಸಗೊಳಿಸಿ ನಾಶಪಡಿಸಿವೆ.
ಈ ಹಿಂದೆಯೂ ಮೂರ್ನಾಲ್ಕು ಬಾರಿ ಕಾಡಾನೆಗಳು ನಮ್ಮ ತೋಟಕ್ಕೆ ದಾಳಿ ನಡೆಸಿ ಬಹಳಷ್ಟು ಗಿಡಗಳನ್ನು ಹಾನಿ ಮಾಡಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಿಂಡು ಈ ಭಾಗದಲ್ಲೇ ಬೀಡು ಬಿಡುತ್ತಿರುವುದರಿಂದ ಮನೆ ಹಾಗೂ ತೋಟಗಳ ಸಮೀಪ ಜನರು ಜೀವ ಭಯದಲ್ಲೇ ಓಡಾಡುವಂತಾಗಿದೆ. ಇಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿ ದೂರದ ಕಾಡಿಗೆ ಓಡಿಸಿದರೆ ನಮ್ಮ ಮಲೆನಾಡು ಭಾಗದ ರೈತರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದರು.