

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಅಸಂಘಟಿತ ವಲಯದ ಕಾರ್ವಿುಕರಿಗೆ ಸೂಕ್ತ ಪರಿಹಾರ ಸೌಲಭ್ಯಗಳ ಮೂಲಕ ಸುಮಾರು 50 ಲಕ್ಷ ಜನರಿಗೆ ಸಾಮಾಜಿಕ ಭದ್ರತೆ ಒದಗಿಸಲು ಸರ್ಕಾರ ಯೋಜನೆ ರೂಪಿಸಿದೆ.
ಒಟ್ಟು 43 ವಲಯಗಳಲ್ಲಿ ಅಸಂಘಟಿತ ಕಾರ್ವಿುಕರಿದ್ದಾರೆ. ಈಗ 20 ವಲಯಗಳ 30 ಲಕ್ಷ ಕಾರ್ವಿುಕರಿಗೆ ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನು ನೀಡಲು ಅಂಬೇಡ್ಕರ್ ಕಾರ್ವಿುಕರ ಸಹಾಯಹಸ್ತ ಯೋಜನೆಯನ್ನು ರೂಪಿಸಲಾಗಿದೆ. ಸಾರಿಗೆ ವಲಯದ 20 ಲಕ್ಷ ಜನರಿಗೆ ವಿಶೇಷ ಮಂಡಳಿಯ ಮೂಲಕ ನೆರವು ಒದಗಿಸಲಾಗುತ್ತಿದೆ. ಪಿಂಚಣಿ, ಶಾಲಾ ಮಕ್ಕಳ ವಿದ್ಯಾಭ್ಯಾಸ ಸೇರಿ ಎಲ್ಲ ರೀತಿಯ ಸೌಲಭ್ಯಗಳನ್ನು ತಕ್ಷಣಕ್ಕೆ ನೀಡಲು ಸಾಧ್ಯವಿಲ್ಲದಿದ್ದರೂ, ಅಪಘಾತ ಪರಿಹಾರ ಸೇರಿ ಕೆಲವೊಂದು ನೆರವನ್ನು ತಕ್ಷಣದಿಂದಲೇ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಸರ್ಕಾರ ಈಗ ನೆರವು ಘೋಷಣೆ ಮಾಡಿರುವ ಕಾರ್ವಿುಕರಿಗೆ ಪ್ರತ್ಯೇಕ ಮಂಡಳಿಗಳನ್ನು ರಚನೆ ಮಾಡಲು ಸಾಧ್ಯವಾಗುವುದಿಲ್ಲ. ಸಂಸ್ಥೆಗಳಲ್ಲಿ ದುಡಿಯುವ ಕಾರ್ವಿುಕರ ಪರವಾಗಿ ಅವರಿಂದ ಸೆಸ್ ಪಡೆಯುವ ಮೂಲಕ ಮಂಡಳಿ ರಚನೆ ಮಾಡಬಹುದು.
ಆದರೆ ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಗಳು ಹೀಗೆ ವಿವಿಧ ವರ್ಗಗಳಿಂದ ಯಾವುದೇ ಸೆಸ್ ಸಂಗ್ರಹ ಮಾಡಲಾಗುವುದಿಲ್ಲ. ಆದ್ದರಿಂದ ಸರ್ಕಾರದಿಂದಲೇ ಒಂದು ಅವಧಿಗೆ 53.74 ಕೋಟಿ ರೂ.ಗಳನ್ನು ಅಂಬೇಡ್ಕರ್ ಕಾರ್ವಿುಕರ ಸಹಾಯ ಹಸ್ತ ಯೋಜನೆಗೆ ಮೀಸಲಿಡಲಾಗುತ್ತಿದೆ.
ಸರ್ಕಾರ ಯೋಜನೆ ಜಾರಿಗೆ ಗುರುತಿಸಿರುವ ಅಸಂಘಟಿತ ಕಾರ್ವಿುಕರಲ್ಲಿ 11 ವರ್ಗಗಳಿಗೆ ಈಗಾಗಲೇ ಸ್ಮಾರ್ಟ್ಕಾಡ್ ವಿತರಿಸಲಾಗಿದೆ. ಉಳಿದ ವರ್ಗಗಳಿಗೆ ಈಗ ಸ್ಮಾರ್ಟ್ಕಾರ್ಡ್ ನೀಡಲಾಗುತ್ತದೆ. ಕೆಲವೊಂದು ನಿಯಮ ಅಂಬೇಡ್ಕರ್ ಯೋಜನೆಗೆ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ. ಫಲಾಭವಿಗಳಿಗೆ 18ರಿಂದ 60 ವರ್ಷ ವಯಸ್ಸಾಗಿರಬೇಕು, ಇಎಸ್ಐ ಅಥವಾ ಇಪಿಎಫ್ ಸೌಲಭ್ಯ ಹೊಂದಿರಬಾರದು, ಫಲಾನುಭವಿಗಳಿಗೆ ನೇರವಾಗಿ ಡಿಬಿಟಿ ಮಾಡಬೇಕು ಎಂಬುದು ಪ್ರಮುಖ ನಿಯಮಗಳಾಗಿವೆ.
* ಅಪಘಾತದಲ್ಲಿ ಮೃತರಾದರೆ 1 ಲಕ್ಷ ರೂ.
* ಅಪಘಾತ ಚಿಕಿತ್ಸೆಗೆ 50 ಸಾವಿರ ರೂ.
* ಅಪಘಾತದಿಂದ ಅಂಗವಿಕಲರಾದರೆ 1 ಲಕ್ಷ ರೂ. ತನಕ ಪರಿಹಾರ
* ಸಹಜ ಸಾವಿನ ಅಂತ್ಯಕ್ರಿಯೆಗೆ 10 ಸಾವಿರ ರೂ.
ಸಾರಿಗೆ ಕಾರ್ವಿುಕರಿಗೆ ಪ್ರತ್ಯೇಕ ಬೋರ್ಡ್: ವಾಣಿಜ್ಯ ವಾಹನಗಳ ಚಾಲಕ ಮತ್ತು ಕ್ಲೀನರ್ಗಳ ನೆರವಿಗೆ ಪ್ರತ್ಯೇಕ ಕಾರ್ವಿುಕ ಮಂಡಳಿಯನ್ನೇ ರಚನೆ ಮಾಡಲು ಸರ್ಕಾರ ನಿರ್ಧರಿಸಿದೆ. ಕಟ್ಟಡ ಕಾರ್ವಿುಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿಯೇ ಸಾರಿಗೆ ಕಾರ್ವಿುಕರ ಕಲ್ಯಾಣ ಮಂಡಳಿಯೂ ಇರುತ್ತದೆ. ಈ ವಲಯದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಕಾರ್ವಿುಕರು ದುಡಿಯುತ್ತಿದ್ದಾರೆ. ಲಾಜಿಸ್ಟಿಕ್ಸ್ನ ಚಾಲಕರು, ಆಟೋ ರಿಕ್ಷಾ ಚಾಲಕರು, ಪಂಚರ್ ಹಾಕುವವರು, ಮೆಕ್ಯಾನಿಕ್ಗಳು ಹೀಗೆ ಸಾರಿಗೆ ಕ್ಷೇತ್ರದಲ್ಲಿ ದುಡಿಯುವ ಪ್ರತಿಯೊಬ್ಬರಿಗೂ ನೆರವಾಗಲಿದೆ. ಏಕೆಂದರೆ ಅವರಿಗೆ ಯಾವುದೇ ಭದ್ರತೆ ಇರುವುದಿಲ್ಲ. ಮಂಡಳಿ ರಚನೆ ಆಗಿದೆ. ಅದಕ್ಕೆ ಅಗತ್ಯ ಪದಾಧಿಕಾರಿಗಳನ್ನು ನೇಮಕ ಮಾಡಿ ಕಾರ್ಯ ಆರಂಭ ಮಾಡಬೇಕಾಗಿದೆ. ಸಾರಿಗೆ ಇಲಾಖೆಯಿಂದ ಹೆಸರುಗಳನ್ನು ನೀಡಬೇಕಾಗಿದೆ. ಅದಕ್ಕೆ ಸಂಬಂಧಿಸಿದ ಕಡತ ಕಾರ್ವಿುಕ ಇಲಾಖೆಯಿಂದ ಸಾರಿಗೆ ಇಲಾಖೆಗೆ ಹೋಗಿದೆ. ಸಾರಿಗೆ ಕಾರ್ವಿುಕರ ಮಂಡಳಿಗೆ ಸಂಬಂಧಿಸಿದಂತೆ ಈಗಾಗಲೇ ಸೆಸ್ ಸಂಗ್ರಹ ಆರಂಭವಾಗಿದೆ. ವಾರ್ಷಿಕ 150 ಕೋಟಿ ರೂ. ಸಂಗ್ರಹವಾಗಬಹುದೆಂಬ ಅಂದಾಜು ಇದೆ ಎಂದು ಕಾರ್ವಿುಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಗಿಗ್, ದಿನ ಪತ್ರಿಕೆ ವಿತರಕರಿಗೆ ಭದ್ರತೆ: ಗಿಗ್ ಕಾರ್ವಿುಕರು ಹಾಗೂ ದಿನ ಪತ್ರಿಕೆ ವಿತರಕ ಕಾರ್ವಿುಕರಿಗೆ ಸರ್ಕಾರ ಬಜೆಟ್ನಲ್ಲಿಯೇ ಸಾಮಾಜಿಕ ಭದ್ರತಾ ಯೋಜನೆ ಪ್ರಕಟಿಸಿದೆ. ಕಾರ್ವಿುಕ ಇಲಾಖೆಯ ವತಿಯಿಂದ ಈ ಕಾರ್ವಿುಕರಿಗೆ ಸ್ಮಾರ್ಟ್ಕಾರ್ಡ್ಗಳನ್ನು ವಿತರಣೆ ಮಾಡಲಾಗುತ್ತದೆ. ಪ್ರತ್ಯೇಕವಾದ ಯೋಜನೆಗಳನ್ನು ಸಂಬಂಧಿಸಿದ ಇಲಾಖೆಗಳ ವತಿಯಿಂದ ರೂಪಿಸಲಾಗುತ್ತಿದೆ.
ಎಷ್ಟು ಜನರಿಗೆ ಅನುಕೂಲ?: ಅಂಬೇಡ್ಕರ್ ಕಾರ್ವಿುಕರ ಸಹಾಯ ಹಸ್ತ ಯೋಜನೆಯ ಜಾರಿಯಿಂದ ಸುಮಾರು 30 ಲಕ್ಷ ಜನರಿಗೆ ಅನುಕೂಲವಾಗುತ್ತದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಒಟ್ಟಾರೆ 55 ಲಕ್ಷಕ್ಕೂ ಅಧಿಕ ಅಸಂಘಟಿತ ಕಾರ್ವಿುಕರಿದ್ದಾರೆ. ಅದರಲ್ಲಿ ಸಾರಿಗೆ, ಗಿಗ್ ಹಾಗೂ ದಿನ ಪತ್ರಿಕೆ ವಿತರಕ ಕಾರ್ವಿುಕರು ಸುಮಾರು 25 ಲಕ್ಷ ಇದ್ದಾರೆ ಎಂದು ಕಾರ್ವಿುಕ ಇಲಾಖೆಯ ಮೂಲಗಳು ಹೇಳುತ್ತವೆ. ಎಲ್ಲ ಜಿಲ್ಲೆಗಳಲ್ಲಿ ಕಾರ್ವಿುಕ ನೋಂದಣಿ ಹಾಗೂ ಸ್ಮಾರ್ಟ್ ಕಾರ್ಡ್ ವಿತರಣೆಯ ಮೂಲಕ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಜಾರಿಗೆ ಬರಲಿದೆ.
ಯಾವ ಯಾವ ಕಾರ್ವಿುಕರಿಗೆ ನೆರವು?: ಹಮಾಲರು, ಚಿಂದಿ ಆಯುವವರು, ಮನೆಗೆಲಸದವರು, ಟೈಲರ್ಗಳು, ಮೆಕ್ಯಾನಿಕ್ಗಳು, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಭಟ್ಟಿ ಕಾರ್ವಿುಕರು, ಸಿನಿಮಾ ಕಾರ್ವಿುಕರು, ನೇಕಾರರು, ಬೀದಿ ಬದಿಯ ವ್ಯಾಪಾರಿಗಳು, ಹೋಟೆಲ್ ಕಾರ್ವಿುಕರು, ಪೋಟೋಗ್ರಾಫರ್ಗಳು, ಸ್ವತಂತ್ರ ಬರಹಗಾರರು, ಕಲ್ಯಾಣ ಮಂಟಪ ಹಾಗೂ ಪೆಂಡಾಲ್ ನಿರ್ವಹಿಸುವ ಕಾರ್ವಿುಕರು, ಬೀಡಿ ಕಾರ್ವಿುಕರು,
ಸಾರಿಗೆ, ಗಿಗ್, ದಿನ ಪತ್ರಿಕೆ ಸೇರಿದಂತೆ 23 ವಲಯ ಗಳಿಂದ 50 ಲಕ್ಷಕ್ಕೂ ಅಧಿಕ ಕಾರ್ವಿುಕರಿದ್ದಾರೆ. ಅವರಿಗೆ ಸಾಮಾಜಿಕ ಭದ್ರತಾ ಯೋಜನೆ ತರುವುದು ಸರ್ಕಾರದ ಉದ್ದೇಶವಾಗಿದೆ. ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಸಂಪೂರ್ಣ ಸರ್ಕಾರದ ನೆರವಿನಲ್ಲಿ ನಡೆಯಲಿದೆ. ಯೋಜನೆಯಲ್ಲಿ ಫಲಾನುಭವಿಗಳಿಗೆ ನೀಡುವ ಸಹಾಯಧನ ಪ್ರತಿ ವರ್ಷ ಹೆಚ್ಚಿಸಲಾಗುತ್ತದೆ. ಸಾರಿಗೆಯಲ್ಲಿ ಮಾತ್ರ ಸೆಸ್ ಸಂಗ್ರಹವಾಗಲಿದೆ. | ಸಂತೋಷ್ ಲಾಡ್ ಕಾರ್ವಿುಕ ಸಚಿವ