ಕರ್ನಾಟಕದಲ್ಲೊಂದು ಹೃದಯ ವಿದ್ರಾವಕ ಘಟನೆ: ಆಂಬ್ಯುಲೆನ್ಸ್ ಸಿಗದೆ ಬೈಕ್​ನಲ್ಲಿ ತಂದೆಯ ಶವ ಸಾಗಿಸಿದ ಮಕ್ಕಳು!

ambulncve
Published on

ತುಮಕೂರು: ಆಂಬ್ಯುಲೆನ್ಸ್ ಸಿಗದ ಪರಿಣಾಮ ಮಕ್ಕಳು ತಮ್ಮ ತಂದೆಯ ಮೃತದೇಹವನ್ನು ಬೈಕ್​ನಲ್ಲಿ ಸಾಗಿಸಿರುವ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಪಾವಗಡ ವೈ ಎನ್ ಹೊಸಕೋಟೆಯಲ್ಲಿ ನಡೆದಿದೆ.

ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ ಗುಡುಗುಲ್ಲ ಹೊನ್ನೂರಪ್ಪ ಎನ್ನುವ 80 ವರ್ಷದ ವ್ಯಕ್ತಿ ಅಸ್ವಸ್ಥಗೊಂಡಿದ್ದರು. ಕೂಡಲೇ ಮಕ್ಕಳು, ಹೊನ್ನೊರಪ್ಪನವರನ್ನ 108 ಆಂಬ್ಯುಲೆನ್ಸ್ ನಲ್ಲಿ ವೈ.ಎನ್ ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ಆದರೆ ಅಷ್ಟರಾಗಲೇ ಹೊನ್ನೂರಪ್ಪನ ಜೀವ ಹೋಗಿದೆ.

ಬಳಿಕ ಮೃತ ಶರೀರವನ್ನು ಮನೆಗೆ ಸಾಗಿಸಲು 108 ಆಂಬ್ಯುಲೆನ್ಸ್ ಸಿಬ್ಬಂದಿ ನಿರಾಕಿಸಿದ್ದಾರೆ. ಮೃತದೇಹವನ್ನು ಆಂಬ್ಯುಲೆನ್ಸ್​​ನಲ್ಲಿ ಸಾಗಿಸುವಂತಿಲ್ಲ ಎಂದಿದ್ದಾರೆ. ಕೈಯಲ್ಲಿ ಹಣವಿಲ್ಲದೇ ಕೊನೆಗೆ ಹೊನ್ನೂರಪ್ಪ ಮಕ್ಕಳು ವಿಧಿಯಿಲ್ಲದೆ ತಂದೆ ಶವವನ್ನು ಬೈಕ್ ನಲ್ಲೇ ತೆಗೆದುಕೊಂಡು ಮನೆ ಹೋಗಿದ್ದಾರೆ.

ಈ ವೇಳೆ ಶವ ಸಾಗಿಸಲು ಆ್ಯಂಬುಲೆನ್ಸ್ ವ್ಯವಸ್ಥೆಗಾಗಿ ಮಕ್ಕಳು ಪರದಾಡಿದ್ದಾರೆ. ಆಸ್ಪತ್ರೆಯಲ್ಲಾಗಲಿ ಹೊರಗೆ ಆಗಲಿ ಆ್ಯಂಬುಲೆನ್ಸ್ ಲಭ್ಯವಿರಲಿಲ್ಲ. ಇನ್ನು ಖಾಸಗಿ ವಾಹನದವರನ್ನೂ ತಕ್ಷಣಕ್ಕೆ ಒಪ್ಪಿಸಲು ಸಾಧ್ಯವಾಗಲಿಲ್ಲ.

ಈ ವೇಳೆ ಬೇರೆ ದಾರಿ ಕಾಣದ ಅವರು ಇಬ್ಬರು ಪುತ್ರರು ವೈ ಎನ್ ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಿಂದ ದಳವಾಯಿಹಳ್ಳಿ ನಿವಾಸದವರೆಗೆ ಬೈಕ್ ನ ಮಧ್ಯದಲ್ಲಿ ಕುರಿಸಿಕೊಂಡು ಹೋಗಿದ್ದಾರೆ. ಶವವನ್ನು ರೈಡರ್ ಹಿಂದೆ ಕೂರಿಸಿ ಹಿಂದೆ ಕೂತಿದ್ದವರು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇದೇ ರೀತಿ ಜಾಗ್ರತೆಯಲ್ಲಿ ಗ್ರಾಮಕ್ಕೆ ತಲುಪಿಸಿ ಬಳಿಕ ಅಂತ್ಯಕ್ರಿಯೆಗಳನ್ನು ಮಾಡಿ ಮುಗಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ: ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಇದರ ಫೋಟೋ ಮತ್ತು ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ. ಶವ ಹೀಗೆ ಸಾಗಿಸಬೇಕೆ ಎಂದು ಸಾರ್ವಜನಿಕರು, ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿದ್ದ ವಿಡಿಯೋದಲ್ಲಿ ಆಸ್ಪತ್ರೆ ಆವರಣದಲ್ಲಿ ಆ್ಯಂಬುಲೆನ್ಸ್ ಇತ್ತು. ಆದರೆ ಅದು ಸುಸ್ಥಿತಿಯಲ್ಲಿ ಇತ್ತೇ ಇಲ್ಲವೇ? ಇದ್ದಲ್ಲಿ ಯಾಕೆ ಅದರಲ್ಲಿ ಶವ ಸಾಗಿಸಿಲ್ಲ ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಂಡಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net