

ಶಿವಮೊಗ್ಗ: ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಆರೋಗ್ಯ ನಿರೀಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಜನನ-ಮರಣ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಆರೋಗ್ಯ ನಿರೀಕ್ಷಕ ಮೊಹಿದ್ದೀನ್(42) ಮೃತರು. ಗೋಪಾಳಗೌಡ ಬಡಾವಣೆಯಲ್ಲಿ ಆರೋಗ್ಯ ನಿರೀಕ್ಷಕನಾಗಿದ್ದ ಮೊಹಿದ್ದೀನ್ ಅವರು ಇತ್ತೀಚೆಗೆ ಜನನ-ಮರಣ ವಿಭಾಗಕ್ಕೆ ನಿಯೋಜನೆಗೊಂಡಿದ್ದರು. ಎಂದಿನಂತೆ ಶುಕ್ರವಾರ ಬೆಳಗ್ಗೆ ಕಚೇರಿಗೆ ಬಂದಿದ್ದು, ಪರಿಷತ್ ಸಭಾಂಗಣದಲ್ಲಿ ಮೇಯರ್ ಕರೆದಿದ್ದ ಸಭೆಗೆ ತೆರಳಿದ್ದರು. ಅಲ್ಲೇ ಕುಸಿದುಬಿದ್ದ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಚಿತ್ರದುರ್ಗ ಮೂಲದ ಮೊಹದ್ದೀನ್ ಅವರು ವಾದಿ-ಎ-ಹುದಾದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಹೃದಯಾಘಾತದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮೇಯರ್ ಸುನೀತಾ ಅಣ್ಣಪ್ಪ, ಆಯುಕ್ತ ಚಿದಾನಂದ ವಟಾರೆ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.