

ಚಂಡೀಗಢ: ಪೊಲೀಸರೆಂದು ಕಳ್ಳರನ್ನು ಹಿಡಿಯುವವರು ಎನ್ನುವ ಕಲ್ಪನೆ ನಮ್ಮ ನಿಮ್ಮೆಲ್ಲರ ತಲೆಯಲ್ಲು ಇರುತ್ತದೆ. ಆದರೆ ಈ ವಿಡಿಯೋ ನೋಡಿದ ಮೇಲೆ ಪೊಲೀಸರೆಂದರೆ ಯಾರು ಎನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಬಂದರೂ ಬರಬಹುದು.
ರಸ್ತೆ ಬದಿಯಲ್ಲಿ ಮೊಟ್ಟೆಯ ಟ್ರೇಗಳನ್ನು ಹೊತ್ತಿದ್ದ ಬೈಕ್ ಒಂದು ನಿಂತಿದೆ. ಅದರ ಹತ್ತಿರವೇ ಇರುವ ಪೊಲೀಸಪ್ಪ, ನಿಧಾನವಾಗಿ ಒಂದೊಂದೇ ಮೊಟ್ಟೆಯನ್ನ ಎತ್ತಿಕೊಂಡು ತನ್ನ ಯುನಿಫಾರಂನ ಜೇಬಿನೊಳಗೆ ತುಂಬಿಕೊಳ್ಳುತ್ತಿದ್ದಾನೆ. ಯಾರಿಗೂ ಗೊತ್ತಾಗದಿರಲಿ ಎಂದು ಅಲ್ಲೇ ಕೈ ಮಾಡುತ್ತಾ ಇದ್ದಾನೆ. ವಾಹನ ಮಾಲೀಕ ಹತ್ತಿರ ಬರುತ್ತಿದ್ದಾನೆ ಎಂದು ತಿಳಿದ ತಕ್ಷಣ ಅಲ್ಲಿಂದ ಹೊರಟ ಆಸಾಮಿ ಯಾವುದೋ ಆಟೋವೊಂದಕ್ಕೆ ಕೈ ಮಾಡಿ ಅದರಲ್ಲಿ ಹತ್ತಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ.
ಅಂದ ಹಾಗೆ ಇದು ಪಂಜಾಬ್ನ ಫತೇಗಡ ಸಾಹಿಬ್ ನಗರದ ಬಳಿ ನಡೆದಿರುವ ಘಟನೆ. ಈ ರೀತಿ ಕಳ್ಳತನ ಮಾಡುತ್ತಿರುವುದು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಪ್ರೀತ್ಪಾಲ್ ಸಿಂಗ್. ಈ ಸಂಪೂರ್ಣ ದೃಶ್ಯವನ್ನು ಯಾರೋ ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವಿಡಿಯೋ ಭಾರೀ ವೈರಲ್ ಆಗಿತ್ತು. ಅದನ್ನು ಗಮನಿಸಿರುವ ಪಂಜಾಬ್ ಪೊಲೀಸರು ಪ್ರೀತ್ಪಾಲ್ ಸಿಂಗ್ನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)