ಬಾಗಿಲು ತೆರೆದ ಹಾಸನಾಂಬೆ ದೇಗುಲ​: ಜಯಘೋಷ ಮೊಳಗಿಸಿದ ಭಕ್ತರು

hasanambe
Published on

ಹಾಸನ: ನಗರದ ಅಧಿದೇವತೆ ಹಾಸನಾಂಬೆ ವರ್ಷದ ಬಳಿಕ ಗುರುವಾರ ವಿಶ್ವರೂಪ ದರ್ಶನ ಕರುಣಿಸಿದಳು.

ಸಂಪ್ರದಾಯದಂತೆ ತಳವಾರ ವಂಶಸ್ಥ ನರಸಿಂಹರಾಜ ಅರಸ್ ದೇವಾಲಯದ ಬಾಗಿಲು ಎದುರು ಪೂಜೆ ಸಲ್ಲಿಸಿ ಬಾಳೆ ಕಂದು ಕತ್ತರಿಸಿದರು. ಆ ನಂತರ ಮುಖ್ಯ ಅರ್ಚಕರು ಮಧ್ಯಾಹ್ನ 12.30ಕ್ಕೆ ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗರ್ಭಗುಡಿ ಬಾಗಿಲಿಗೆ ವರ್ಷದ ಹಿಂದೆ ಹಾಕಿದ್ದ ಬೀಗ ತೆರೆಯುತ್ತಿದ್ದಂತೆ ಭಕ್ತರ ಜಯಘೋಷ ಮೇಳೈಸಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂ ಜೆ.ಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಆರ್.ಶ್ರೀನಿವಾಸ್ ಗೌಡ, ಸಚಿವ ಮಾಧುಸ್ವಾಮಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸೇರಿದಂತೆ ಪ್ರಮುಖರು ಆಭರಣಾಲಂಕಾರವಿಲ್ಲದ ದೇವಿಯ ವಿಶ್ವರೂಪ ದರ್ಶನ ಪಡೆದರು.

ಕೋವಿಡ್​ ಲಸಿಕೆ ಪ್ರಮಾಣಪತ್ರ ಹಾಗೂ ಗುರುತಿನ ಕಾರ್ಡ್​ ಹೊಂದಿರುವವರಿಗೆ ಮಾತ್ರ ಹಾಸನ ನಗರದ ಅಧಿದೇವತೆ ಹಾಸನಾಂಬೆಯ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಅಶ್ವೀಜ ಮಾಸದ ಪ್ರಥಮ ಗುರುವಾರ ದೇವಸ್ಥಾನದ ಗರ್ಭಗುಡಿ ಬಾಗಿಲು ತೆರೆದಿದ್ದು, ಬಲಿಪಾಢ್ಯಮಿ ಮರುದಿನವಾದ ನ.6ರಂದು ಬಾಗಿಲು ಮುಚ್ಚಲಾಗುವುದು. ಅ.28 ಹಾಗೂ ನ.6ರಂದು ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ. ಉಳಿದ ದಿನಗಳಲ್ಲಿ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್​ ನಿಯಂತ್ರಣ ದೃಷ್ಟಿಯಿಂದ ವಯೋವೃದ್ಧರು ಹಾಗೂ ಮಕ್ಕಳನ್ನು ದೇವಾಲಯಕ್ಕೆ ಕರೆತರದಂತೆ ಜಿಲ್ಲಾಡಳಿತ ಸಲಹೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net