ಸುಖಬದುಕಿಗೆ ನೂರಾರು ಸ್ವಭಾವಗಳ ಅನ್ಯೋನ್ಯ ಮೈತ್ರಿ ಅಗತ್ಯ

-684c61bee261d
Published on
ನರರವೊಲೆ ಸುರರುಮಲೆದಲೆದು ಮರೆಯಾಗಿಹರು|

ಭರತದೇಶದೊಳಮೈಗುಪ್ತಯವನರೊಳಂ||

ಸುರ ನಾಮ ರೂಪಗಳಸಂಖ್ಯಾತ, ನಿಜವೊಂದು|

ತೆರೆ ಕೋಟಿ ಕಡಲೊಂದು-ಮಂಕುತಿಮ್ಮ||487||

ಮನುಷ್ಯರಂತೆಯೇ ದೇವತೆಗಳು ಕೂಡಾ ಅಲೆದಲೆದು ಮರೆಯಾಗಿದ್ದಾರೆ. ಭಾರತ, ಮೈಗುಪ್ತ (ಈಜಿಪ್ಟ್), ಯವನ (ಗ್ರೀಸ್) ರಲ್ಲಿಯೂ ಹೀಗಾಗಿದೆ. ದೇವತೆಗಳ ಹೆಸರು, ರೂಪಗಳು ಅನೇಕ. ಆದರೆ ಸತ್ಯವು ಒಂದೇ. ಕೋಟಿ ಕೋಟಿ ಅಲೆಗಳಿದ್ದರೂ ಕಡಲು ಒಂದೇ ಎಂಬಂತೆ ಇದು ಎನ್ನುತ್ತದೆ ಈ ಕಗ್ಗ.

ಎತ್ತರವಾದ ಬೆಟ್ಟವನ್ನು ಬೇರೆಬೇರೆ ಸ್ಥಳಗಳಿಂದ ನೋಡಿದಾಗ ವಿಭಿನ್ನವಾಗಿಯೇ ಕಾಣುತ್ತದೆ. ಬೆಟ್ಟದ ಬುಡ, ಮಧ್ಯ, ಶಿಖರಾಗ್ರಗಳಲ್ಲಿ ಕಾಣುವ ಚಿತ್ರಣವು ಒಂದೇ ರೀತಿಯಾದುದಲ್ಲ. ಪಕ್ಕದಲ್ಲಿರುವ ಇನ್ನೊಂದು ಬೆಟ್ಟವನ್ನೇರಿ ನೋಡಿದರೂ ಬೆಟ್ಟವು ಬೇರೆಯದೇ ರೂಪದಲ್ಲಿ ಕಾಣುತ್ತದೆ. ಇರುವುದೊಂದೇ ಬೆಟ್ಟ, ಆದರೆ ನೋಡುಗನ ಸ್ಥಾನ, ಗ್ರಹಿಸುವ ಸಾಮರ್ಥ್ಯಗಳನ್ನು ಅವಲಂಬಿಸಿ ಹಲವು ಬಗೆಯ ಚಿತ್ರಣಗಳನ್ನದು ಪಡೆಯುತ್ತದೆ. ಅಂತೆಯೇ ನಿತ್ಯಸತ್ಯವು ಒಂದೇ. ಇದನ್ನು ಬೇರೆಬೇರೆ ಕಾಲದಲ್ಲಿ ಹಲವರು ಹಲವು ಬಗೆಯಲ್ಲಿ ಗ್ರಹಿಸಿ ತಮ್ಮದೇ ರೀತಿಯಿಂದ ವರ್ಣಿಸಿದ್ದಾರೆ, ವ್ಯಾಖ್ಯಾನಿಸಿದ್ದಾರೆ. ಹೀಗೆ ಆಯಾಯ ಕಾಲದಲ್ಲಿ ತಮಗಾದ ಸತ್ಯ ದರ್ಶನವನ್ನು ಸಮಾಜ ದೆದುರು ಸಮರ್ಥವಾಗಿ ತೆರೆದಿಡಲು ಶಕ್ಯರಾದವರು ಒಂದೊಂದು ಮತ, ಪಂಥದ ಆರಂಭಕ್ಕೆ ಕಾರಣರಾಗಿದ್ದಾರೆ. ಹಾಗಾಗಿಯೇ ಭಾರತ, ಈಜಿಪ್ಟ್, ಗ್ರೀಕ್ ಮೊದಲಾದ ದೇಶಗಳಲ್ಲಿ ಹಲವಾರು ದೇವಾನುದೇವತೆಗಳು, ನಂಬಿಕೆ- ನಡಾವಳಿಗಳು ಬಳಕೆಗೆ ಬಂದಿವೆ.

ಬದಲಾವಣೆಯೊಂದೆ ಶಾಶ್ವತವಾಗಿಯೂ ಅನಿಯಂತ್ರಿತ ವಾಗಿಯೂ ನಡೆಯುವ ಪ್ರಕ್ರಿಯೆ. ಕಾಲಧರ್ಮಕ್ಕೆ ಅನುಗುಣವಾಗಿ ಮನೋಧರ್ಮವೂ ಬದಲಾಗುತ್ತದೆ. ಇದರಿಂದಾಗಿ ಸಮಾಜದಲ್ಲಿ ಹೊಸದೆನಿಸುವ ಸಿದ್ಧಾಂತಗಳು ಹಳೆಯದನ್ನು ಬದಿಗೊತ್ತಿ ಅಥವಾ ಹಳೆಯದರ ಮುಂದುವರಿದ ಭಾಗವಾಗಿ ವಿಕಸನಗೊಳ್ಳುತ್ತವೆ. ಲೋಕ ಕ್ಷೇಮ, ಶಾಂತಿ ಸೌಖ್ಯವನ್ನು ಉದ್ದೇಶಿಸಿ ರೂಪುಗೊಂಡ ಸಿದ್ಧಾಂತ, ನಂಬಿಕೆ ಮತ್ತು ಮಾರ್ಪಾಡುಗಳು ಸ್ವೀಕಾರಾರ್ಹವೆನ್ನಿಸುತ್ತವೆ. ಹಾಗಲ್ಲದೆ ಇದ್ದರೆ ವಿಫಲವಾಗುತ್ತವೆ. ಎಷ್ಟೋ ಸಲ ಒಂದು ಕಾಲದಲ್ಲಿ ಸರಿ ಎನ್ನಿಸಿದ, ಪ್ರಶ್ನಾತೀತವಾಗಿದ್ದ ತತ್ವ-ಸಿದ್ಧಾಂತಗಳು ಇನ್ನೊಂದು ಕಾಲಕ್ಕೆ ಪ್ರಶ್ನೆಯಾಗುತ್ತವೆ, ಪಡೆವ ಉತ್ತರದಲ್ಲಿ ಹುರುಳಿಲ್ಲ ಎಂದೆನ್ನಿಸುತ್ತದೆ. ವಿವೇಚನಾ ಶಕ್ತಿಯುಳ್ಳವರು ಸರಿಯಾದುದನ್ನು ಕಂಡುಕೊಂಡು ಅನುಸರಿಸುತ್ತಾರೆ. ಹೀಗೆ ಮತ, ಪಂಥ, ದೇವರ ಸ್ವರೂಪ, ದೇವತೆಗಳು ನಂಬಿಕೆಯಾಗಿ ಬದುಕಿಗಿಳಿಯುತ್ತಾರೆ, ಜಗದಗಲ ಅಲೆಯುತ್ತಾರೆ.

ಮನುಷ್ಯನು ಸುಖವಾಗಿ ಬಾಳಬೇಕಾದರೆ ಅವನೊಳಗೆ ಕೇವಲ ಒಂದು ಗುಣವಿಕಾಸವಾಗಿದ್ದರಷ್ಟೇ ಸಾಕಾಗುವುದಿಲ್ಲ. ನೂರಾರು ಸ್ವಭಾವಗಳ ಅನ್ಯೋನ್ಯ ಮೈತ್ರಿಯ ಅಗತ್ಯವಿದೆ. ಹಾಗೆಯೇ ಮನೆ. ಕುಲ, ಉದ್ಯೋಗ, ರಾಜ್ಯ ವ್ಯವಸ್ಥೆಗಳು ಏಕಸೂತ್ರದಿಂದ ಸಾಗಬೇಕಾದರೆ ಕೆಲವೊಂದು ಸಿದ್ಧಾಂತ, ಆದರ್ಶ ಮತ್ತು ನಂಬಿಕೆಗಳ ಒಗ್ಗೂಡುವಿಕೆಯ ಅಗತ್ಯವಿದೆ. ವಿವೇಕಿಯಾದ ಮನುಜನು ತನ್ನ ಸಾಮಾಜಿಕ ಬದ್ಧತೆಯನ್ನು ಅರ್ಥ ಮಾಡಿಕೊಂಡು, ಎಲ್ಲರನ್ನೂ ಗೌರವಿಸುತ್ತಾ ತಾನೂ ಆತ್ಮಗೌರವದಿಂದ ಬಾಳಬೇಕು. ನಿರಹಂಕಾರಿಯಾದವನು ಮಾತ್ರ ಸಮಾಜದೊಡನೆ ಬೆರೆಯಬಲ್ಲ. ತನಗೆ ಮೀರಿದ ಶಕ್ತಿಯೊಂದಿದೆ ಎಂದು ಅರಿತರಷ್ಟೇ ವ್ಯಕ್ತಿಯು ವಿನೀತನಾಗಬಲ್ಲ, ಅದನ್ನು ನಂಬಿ ಭರವಸೆಯಿಂದ ಬಾಳಬಲ್ಲ. ಮನುಜನ ಈ ವಿಶ್ವಾಸವೇ ಎಲ್ಲಾ ಕಾಲದಲ್ಲೂ ವಿವಿಧ ದೇವತೆಗಳನ್ನು ಆರಾಧಿಸುವಂತೆ ಮಾಡಿದೆ ಎನ್ನುವುದು ಸುಳ್ಳಲ್ಲ.

ನಿತ್ಯ ನೂತನವೂ ಜೀವನಾಧಾರವೂ ಆದ ಪ್ರಕೃತಿಯೇ ವಿವಿಧ ರೂಪಗಳಿಂದ ಭೂಮಿಯನ್ನು ಪೊರೆಯುತ್ತಿದೆ. ತನ್ನರಿವಿಗೆ ನಿಲುಕದ ನಿಯಾಮಕ ಶಕ್ತಿಯ ಕಣ್ಗಾವಲಲ್ಲಿ ತಾನಿದ್ದೇನೆ ಎಂಬ ನಂಬಿಕೆಯು ಮನುಜನನ್ನು ಸಹೃದಯನನ್ನಾಗಿಸುತ್ತದೆ. ಸತ್ಯದ ಹುಡುಕಾಟದಲ್ಲಿರುವ ವ್ಯಕ್ತಿಗೆ ತನ್ನ ಮತಿಯ ಮಿತಿಗೆ ನಿಲುಕಿದ ಸತ್ಯದ ಒಂದು ಪುಟ್ಟ ದರ್ಶನವೂ ಅತ್ಯಂತ ಮಹತ್ತರವಾದುದಾಗಿರುತ್ತದೆ. ಏನೇ ಆದರೂ, ಎಷ್ಟೇ ದೇವಾನುದೇವತೆಗಳಿದ್ದರೂ ಅವೆಲ್ಲವೂ ಪರಬ್ರಹ್ಮ ಸ್ವರೂಪದ ಒಂದು ಪುಟ್ಟ ಮಿಂಚು. ಕಡಲಿನಲ್ಲಿ ಸಾವಿರಾರು ಅಲೆಗಳು ಒಂದನ್ನೊಂದು ಮೀರಿಸಿ ಮುಗಿಲೆತ್ತರ ಲಂಘಿಸುತ್ತವಾದರೂ ಮರಳಿ ಸೇರುವುದು ಕಡಲನ್ನೇ ತಾನೆ? ಕಡಲಿರದೆ ಅಲೆಗಳಿಲ್ಲ, ಆದರೆ ಅಲೆಗಳಿರದೆ ಕಡಲು ಇರಬಲ್ಲುದು.

ಜಗದ ಕಣ್ಣಾಗಿರುವ ಸೂರ್ಯನು ಆಯಾಯ ಊರು, ದೇಶಗಳ ವಾತಾವರಣಕ್ಕೆ ಅನುಗುಣವಾಗಿ ಅನುಭವಕ್ಕೆ ನಿಲುಕುತ್ತಾನೆ. ಪ್ರತಿ ಬೆಳಗೂ ಹೊಚ್ಚಹೊಸದು, ಪ್ರತಿದಿನವೂ ಹೊಸ ಅರಿವು. ಬೆಳಕು ಒಂದೇ ಆಗಿದ್ದರೂ ಪಡೆಯುವ ರೀತಿ ಬೇರೆಬೇರೆಯಾಗಿರುವಂತೆಯೇ, ಕಡಲೊಂದೇ ಆಗಿದ್ದರೂ ಹೊರಹೊಮ್ಮುವ ಅಲೆಗಳು ಹಲವಿರುವಂತೆಯೇ, ವಿಶ್ವದಾದ್ಯಂತ ಜನರ ಅಂತರಂಗದಲ್ಲಿರುವ ದೇವಾನುದೇವತೆಗಳು ನಿಯಾಮಕ ಶಕ್ತಿಯ ಸ್ವರೂಪವೇ ಆಗಿವೆ. ಜನರ ಈ ನಂಬಿಕೆಗಳು ಇತರರನ್ನು ಘಾಸಿಗೊಳಿಸದೆ ಸಮಾಜದ ಶ್ರೇಯಸ್ಸಿಗೆ ಕಾರಣವಾಗಬೇಕು. ಎಲ್ಲರಿಗೂ ಒಳ್ಳೆಯದನ್ನು ಹರಸುವ ದೇವರು ಮತ್ತು ಧರ್ಮವು ಎಲ್ಲಾ ಕಾಲದಲ್ಲೂ ಭದ್ರವಾಗಿ ನೆಲೆಯೂರುತ್ತದೆ, ಅಳಿಯದೇ ಉಳಿದು ಬೆಳೆಯುತ್ತದೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ, ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net