

ವಾರಣಾಸಿ (ಉತ್ತರ ಪ್ರದೇಶ): ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾದ ಶಿವಲಿಂಗ ವಿಗ್ರಹ ಕುರಿತು ವೈಜ್ಞಾನಿಕ ಅಧ್ಯಯನ(ಕಾರ್ಬನ್ ಡೇಟಿಂಗ್) ನಡೆಸದಂತೆ ವಾರಣಾಸಿ ಜಿಲ್ಲಾ ಕೋರ್ಟ್ ಆದೇಶ ನೀಡಿದೆ.
ಮಸೀದಿಯೊಳಗಿನ ದೇಗುಲದಲ್ಲಿ ವರ್ಷಪೂರ್ತಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡಬೇಕು. ಹಾಗೂ ಶಿವಲಿಂಗದ ವಯಸ್ಸನ್ನ ಅರಿಯಲು ಕಾರ್ಬನ್ ಡೇಟಿಂಗ್ ಪ್ರಕ್ರಿಯೆಯನ್ನು ಒಳಗೊಂಡಂತೆ ವೈಜ್ಞಾನಿಕ ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ಹಿಂದು ಮಹಿಳಾ ಅರ್ಜಿದಾರರು ಕಳೆದ ತಿಂಗಳು ಕೋರ್ಟ್ನ ಮೊರೆ ಹೋಗಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್, ಆದೇಶವನ್ನ ಕಾಯ್ದಿರಿಸಿತ್ತು. ಇಂದು(ಅ.14) ತೀರ್ಪು ಪ್ರಕಟವಾಗಿದ್ದು, ಕಾರ್ಬನ್ ಡೇಟಿಂಗ್ ನಡೆಸಂತೆ ಸೂಚಿಸಿದೆ.
ಕಾರ್ಬನ್ ಡೇಟಿಂಗ್ ನಡೆಸಲು ನಾವು ಕೋರಿದ್ದ ಮನವಿಯನ್ನ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಕೋರ್ಟ್ನ ಆದೇಶದ ಪ್ರತಿಗಾಗಿ ಕಾಯುತ್ತಿದ್ದೇವೆ. ಹೈಕೋರ್ಟ್‌ನ ಮೊರೆ ಹೋಗುತ್ತೇವೆ ಎಂದು ಹಿಂದು ಅರ್ಜಿದಾರ ಪರ ವಕೀಲ ಮದನ್ ಮೋಹನ್ ಯಾದವ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.