

ಬೆಂಗಳೂರು: ಸೆ.30ರಂದು ಬಿಡುಗಡೆಯಾದ ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಸಿನಿಮಾ 3ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿರೀಕ್ಷೆ ಮೀರಿ ಹಿಟ್ ಆಗಿರುವ ಈ ಚಿತ್ರ ಪ್ಯಾನ್ ಇಂಡಿಯಾ ಆಗಿದೆ. ಕರ್ನಾಟಕದಲ್ಲಷ್ಟೇ ಅಲ್ಲ, ಬೇರೆಬೇರೆ ರಾಜ್ಯಗಳ ಮತ್ತು ದೇಶಗಳ ಪ್ರಮುಖ ನಗರಗಳ ಮಲ್ಟಿಪ್ಲೆಕ್ಸ್ನಲ್ಲೂ ಬಿಡುಗಡೆಯಾಗಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ವಿವಿಧ ಭಾಷೆಯ ಸಿನಿಮಾ ಮಂದಿಯೂ ಚಿತ್ರ ವೀಕ್ಷಿಸಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಸುಸಂದರ್ಭದಲ್ಲಿ 'ಕನ್ನಡ ಸಿನಿಮಾದ ಗತವೈಭವ' ಎಂಬ ಟ್ಯಾಗ್ಲೈನ್ನಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ..!
ಅದು ಹಿಂದಿ ಯುಟ್ಯೂಬರ್ ಒಬ್ಬರು ಸಂದರ್ಶನ ಮಾಡುತ್ತಿರುವಾಗಲೇ ರಿಷಬ್ ಶೆಟ್ಟಿಯ ಕಾಲಿಗೆ ಬಿದ್ದು ನಮಸ್ಕರಿಸುತ್ತಿರುವ ವಿಡಿಯೋ! ಕಾಂತಾರ ಸಿನಿಮಾ ಹಿಂದಿ ವಲಯದಲ್ಲೂ ತೆರೆಕಂಡಿದೆ. ಹಾಗಾಗಿ ಚಿತ್ರ ಪ್ರಚಾರಕ್ಕೆಂದು ರಿಷಬ್ ಹಾಗೂ ಚಿತ್ರದ ನಾಯಕಿ ಸಪ್ತಮಿ ಗೌಡ ಮುಂಬೈನಲ್ಲಿ ಪ್ರಚಾರಕ್ಕೆಂದು ತೆರಳಿದ್ದಾರೆ. ಹಲವು ವಾಹಿನಿಗಳು, ಯುಟ್ಯೂಬ್ ವಾಹಿನಿಗಳಿಗೂ ಚಿತ್ರತಂಡ ಸಂದರ್ಶನ ನೀಡುತ್ತಿದೆ. ಹಿಂದಿ ಸಿನಿಮಾ ವಿಮರ್ಶೆ ಮತ್ತು ಸೆಲೆಬ್ರಿಟಿಗಳ ಸಂದರ್ಶನದಿಂದಲೇ ಜನಪ್ರಿಯವಾಗಿರುವ ಯುಟ್ಯೂಬರ್ ಸೂರಜ್ಕುಮಾರ್ ಎಂಬುವವರು ರಿಷಬ್ರ ಕಾಲಿಗೆ ಬಿದ್ದು ನಮಸ್ಕರಿಸುತ್ತಾ, 'ಸರ್ ನೀವು ಅದ್ಭುತ ಸಿನಿಮಾ ಮಾಡಿದ್ದೀರಿ. ನನ್ನ ಲವರ್ಗಿಂತ ನಿಮ್ಮನ್ನೇ ಹೆಚ್ಚು ಇಷ್ಟಪಡ್ತೀನಿ' ಎಂದಿದ್ದಾರೆ.
'ಸರ್ ನೀವು ಮೊದಲು ನಿಂತುಕೊಳ್ಳಿ...' ಯುಟ್ಯೂಬರ್ ಸೂರಜ್ ಹೇಳಿದಾಗ ರಿಷಬ್ ಕುರ್ಚಿಯಿಂದ ಮೇಲೆದ್ದರು. ಕ್ಷಣಾರ್ಧದಲ್ಲೇ ಅವರನ್ನ ಬಿಗಿದಪ್ಪಿಕೊಂಡ ಸೂರಜ್, ಕೂಡಲೇ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. 'ನೀವು ಎಂತಹ ಅದ್ಭುತ ಸಿನಿಮಾ ಮಾಡಿದ್ದೀರಿ ಸರ್. ನಾನು ತಮಾಷೆಗೆ ಹೀಗೆ ಮಾಡುತ್ತಿಲ್ಲ. ಸಿನಿಮಾದಲ್ಲಿ ನಿಮ್ಮ ನಟನೆಯನ್ನ ನೋಡಿದ ನನಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಗರ್ಲ್ ಫ್ರೆಂಡ್ಗಿಂತ ಜಾಸ್ತಿ ನಿಮ್ಮನ್ನೇ ಲವ್ ಮಾಡ್ತೀನಿ' ಎಂದು ಸೂರಜ್ ಹೇಳಿದ್ದಾರೆ. ಕಾಲಿಗೆ ಬಿದ್ದಾಗ ನಟ ರಿಷಬ್ ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಈ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂತಾರ ಬಿಡುಗಡೆಯಾದ ಎರಡು ವಾರಗಳಲ್ಲಿ ದೇಶಾದ್ಯಂತ ಬರೀ ಕನ್ನಡ ಅವತರಣಿಕೆಯೊಂದರಿಂದಲೇ 50 ಪ್ಲಸ್ ಕೋಟಿ ರೂ. ಗಳಿಕೆಯಾಗಿದೆ. ಇದರಲ್ಲಿ ನಿರ್ಮಾಪಕರ ಶೇರ್ 25 ಕೋಟಿ ರೂ. ಆಗಬಹುದು ಎಂದು ಹೇಳಲಾಗುತ್ತಿದೆ.