PHOTOS| ರಮೇಶ್ ಯಕ್ಷಾವತಾರ! ನಟನ ಸಂಭ್ರಮಕ್ಕೆ ಪಾರವೇ ಇಲ್ಲ...

ramesh aravind
Published on

ಉಡುಪಿ: ಮೊಟ್ಟ ಮೊದಲ ಬಾರಿಗೆ ಯಕ್ಷಗಾನದ ವೇಷತೊಟ್ಟ ನನ್ನಲ್ಲೀಗ ದಿವ್ಯತೆಯ ಭಾವ ಬೆಳೆದಿದೆ. ನೂರೈವತ್ತು ಕೆಜಿ ಬೆಳೆದವನಂತೆ ಭಾಸವಾಗುತ್ತಿದೆ. ಬಹಳವೇ ಶಕ್ತಿಶಾಲಿ, ಎದುರಿಗೇನಾದರೂ ರಾಕ್ಷಸರು ಬಂದರೆ ಹೊಡೆದುರುಳಿಸಿ ಬಿಡುತ್ತೇನೆ ಅನ್ನುವಷ್ಟು ಆತ್ಮವಿಶ್ವಾಸ ಬೆಳೆದಿದೆ…

ಇದು ಯಕ್ಷಗಾನ ವೇಷಧರಿಸಿ ರೋಮಾಂಚನಗೊಂಡ ನಟ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ ಅವರ ಮಾತು. ಇತ್ತೀಚೆಗೆ ಉಡುಪಿಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ರಮೇಶ್ ಅರವಿಂದ್‌, ವೈದ್ಯ ಡಾ. ವಿರೂಪಾಕ್ಷ ದೇವರುಮನೆ ಅವರೊಂದಿಗೆ ಫೋಕಸ್ ರಾಘು ಅವರ ಸ್ವರ್ಣ ನದಿ ಮಧ್ಯದಲ್ಲಿರುವ ’ಕುದ್ರು ನೆಸ್ಟ್’ಗೆ ಭೇಟಿ ನೀಡಿದ್ದರು. ಪರಿಸರ, ನದಿ, ಮನೆಯ ಕ್ರಿಯಾಶೀಲ ವಿನ್ಯಾಸವನ್ನು ಕಂಡು ಮೆಚ್ಚುಗೆ ಸೂಚಿಸಿದ್ದ ರಮೇಶ್​, 'ನನ್ನ ಫೋಟೋಶೂಟ್ ಮಾಡ್ತೀರಾ, ಕಾನ್ಸೆಪ್ಟ್ ಎಲ್ಲವೂ ನಿಮ್ಮದೇ' ಎಂದಿದ್ದರು. ಇದಾದ ಒಂದು ವಾರಕ್ಕೆ 'ಕಾರಂತ ಹುಟ್ಟೂರ ಪ್ರಶಸ್ತಿ' ಸ್ವೀಕರಿಸಲು ಆಗಮಿಸಿದ್ದ ರಮೇಶ್​, ಕರಾವಳಿಯ ಶೈಲಿಯಲ್ಲೇ ಯಕ್ಷಗಾನದ ಫೋಟೋ ತೆಗೆಸಿಕೊಂಡಿದ್ದಾರೆ.

'ಪ್ರಶಸ್ತಿ ಪಡೆಯಲು ಹೋಗಿದ್ದಾಗ ಕೋಟ ಶಿವರಾಮ ಕಾರಂತ ಥೀಂ ಪಾರ್ಕಿನಲ್ಲಿ ಕಾರಂತರು ಸ್ವತಃ ಯಕ್ಷಗಾನ ವೇಷ ಹಾಕಿದ್ದ ಚಿತ್ರ ಕಂಡು ರೋಮಾಂಚಿತನಾದೆ. ಅವರೊಂದು ಬತ್ತದ ಕುತೂಹಲ. ಯಕ್ಷಗಾನ ಕಲಾವಿದರಿಗೆ ಪ್ರತ್ಯೇಕ ಮೇಕಪ್ ಆರ್ಟಿಸ್ಟ್‌ಗಳು ಇರುವುದಿಲ್ಲ. ಸ್ವತಃ ತಾವೇ ಬಣ್ಣ ಹಚ್ಚಿ, ಬಟ್ಟೆ ತೊಟ್ಟು, ಹೆಜ್ಜೆ ಕಟ್ಟುವ ರೀತಿಗೆ ಬೆರಗಾದೆ' ಎಂದು ರಮೇಶ್​ ಅರವಿಂದ್​ ಹೇಳಿದ್ದಾರೆ.

'ಮಂಗಳೂರಿನಿಂದ ಕಾರವಾರದವರೆಗೂ, ಕನ್ನಡ ಕರಾವಳಿಯಾದ್ಯಂತ ಅನೇಕ ಸಿನಿಮಾಗಳನ್ನು ಮಾಡಿದ್ದೇನೆ. ಆ ಹೊತ್ತಿಗೆಲ್ಲ ಯಕ್ಷಗಾನವನ್ನು ಗಮನಿಸುತ್ತಿದ್ದೆ. ಆರೇಳು ಗಂಟೆ ಏರು ಧ್ವನಿಯಲ್ಲಿ ಹಾಡುವ ಭಾಗವತರ ಶಕ್ತಿಯ ಬಗ್ಗೆ ಆಶ್ಚರ್ಯವಾಗುತ್ತದೆ. ಕಲಾವಿದರನ್ನು ಕಂಡು ನಾನೂ ಒಮ್ಮೆ ಯಕ್ಷಗಾನದ ಬಣ್ಣ ಹಚ್ಚಬೇಕೆಂಬ ಆಸೆ ಇತ್ತು. ಕ್ರಿಯಾಶೀಲ ಛಾಯಾಗ್ರಾಹಕ ಫೋಕಸ್ ರಾಘು ನನ್ನ ಕನಸನ್ನು ನನಸಾಗಿಸಿದ್ದಾರೆ' ಎಂದು ರಮೇಶ್​ ಅರವಿಂದ್​ ಸಂತಸ ವ್ಯಕ್ತಪಡಿಸಿದ್ದಾರೆ.

ರಮೇಶ್ ಅರವಿಂದ್​ ಅವರಿಗೆ ಶೈಲೇಶ್ ತೀರ್ಥಹಳ್ಳಿ ಯಕ್ಷಗಾನದ ವೇಷ ತೊಡಿಸಿದರು. ಮನೋವೈದ್ಯ, ಲೇಖಕ ಡಾ. ವಿರೂಪಾಕ್ಷ ದೇವರುಮನೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net