ಒಂಟಿ ಮನೆಗೆ ನುಗ್ಗಿದ ಕಳ್ಳರ ತಂಡ

Published on

ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟ ಗ್ರಾಮದ ಬಳಿಯ ತೋಟದ ಮನೆಯೊಂದಕ್ಕೆ ಸೋಮವಾರ ವಿಳಾಸ ಕೇಳುವ ನೆಪದಲ್ಲಿ ಆಗಮಿಸಿದ ನಾಲ್ಕೈದು ಜನರ ತಂಡ ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಹಲ್ಲೆಗೆ ಮುಂದಾಗಿ ಕಳ್ಳತನಕ್ಕೆ ಯತ್ನಿಸಿದೆ.


ತಾಲೂಕಿನ ಕತ್ತರಿಘಟ್ಟದಲ್ಲಿ ಹಾಡಹಗಲೇ ನಡೆದಿರುವ ಘಟನೆ ತಾಲೂಕಿನಲ್ಲಿರುವ ತೋಟದ ಮನೆಗಳ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಜುಲೈ 8ರಂದು ಕತ್ತರಿಘಟ್ಟ ಗ್ರಾಮದ ಹೊರಭಾಗದಲ್ಲಿ ತೋಟದಲ್ಲಿ ವಾಸವಿದ್ದ ಸುಶೀಲಮ್ಮ ಅವರು ಬೆಳಗ್ಗೆ 10 ಗಂಟೆಯಲ್ಲಿ ಮನೆಯಲ್ಲಿದ್ದರು. ಈ ವೇಳೆ 25 ರಿಂದ 30 ವರ್ಷದ ಅಪರಿಚಿತ ವ್ಯಕ್ತಿ ಮನೆಯ ಬಾಗಿಲು ಬಡಿದಿದ್ದಾನೆ, ಬಾಗಿಲು ತೆರೆದ ಸುಶೀಲಮ್ಮರನ್ನು ಊಪಿನಹಳ್ಳಿ ರಾಜಣ್ಣ ಅವರ ಮನೆ ಎಲ್ಲಿ ಎಂದು ಕೇಳಿದ್ದಾನೆ. ನನಗೆ ಗೊತ್ತಿಲ್ಲ, ನಮ್ಮ ಮನೆಯ ಹಿಂಭಾಗದಲ್ಲಿರುವ ಮನೆಯವರನ್ನು ಕೇಳಿ ಎಂದಿದ್ದಾರೆ. ತಕ್ಷಣವೇ ಮನೆಯಾಚೆ ನಿಂತಿದ್ದ ನಾಲ್ವರು ಮನೆಯೊಳಗೆ ಓಡಿಬಂದು ಸುಶೀಲಮ್ಮರನ್ನು ಹಿಡಿದುಕೊಂಡಿದ್ದಾರೆ. ಇದರಿಂದ ಗಾಬರಿಗೊಂಡ ಆಕೆ ಜೋರಾಗಿ ಕಿರುಚಿದ್ದಾರೆ. ಇದರಿಂದ ತಾವು ಸಿಕ್ಕಿಬೀಳಲಿದ್ದೇವೆ ಎಂದುಕೊಂಡ ಕಳ್ಳರು ಆಕೆಯ ಕುತ್ತಿಗೆ ಹಿಸುಕಿ, ಪಂಚೆಯಿಂದ ಕುತ್ತಿಗೆ ಸುತ್ತಿ ಉಸಿರುಗಟ್ಟಿಸಿ ಸಾಯಿಸಲು ಮುಂದಾಗಿದ್ದಾರೆ.


ಆದೇ ವೇಳೆಗೆ ಮನೆಯ ಬಳಿ ಬಂದ ಸುಶೀಲಮ್ಮನ ಭಾವ ದೇವರಾಜೇಗೌಡ ಅವರು ಹೊರಗಡೆ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಕಂಡು ನೀನ್ಯಾರು ಎಂದು ವಿಚಾರಿಸಿದ್ದಾರೆ. ನಾವು ಕಿಕ್ಕೇರಿಯವರು, ತೆಂಗಿನ ಚಿಪ್ಪು ಕೊಳ್ಳಲು ಬಂದಿದ್ದೇವೆ. ಮನೆಯವರು ಕೆಳಗಡೆ ಎಮ್ಮೆ ಕಟ್ಟಲು ಹೋಗಿದ್ದಾರೆ, ಅವರನ್ನು ಕರೆಯಲು ನಮ್ಮವರು ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ. ಇದನ್ನು ನಿಜವೆಂದು ನಂಬಿದ ದೇವರಾಜೇಗೌಡ ಮನೆಯ ಬಾಗಿಲು ಹಾಕಿರುವುದನ್ನು ನೋಡಿ ವಾಪಸ್ ಹೋಗಿದ್ದಾರೆ. ನಂತರ ಕಾರಿನಲ್ಲಿದ್ದವನು ಇತರ ಕಳ್ಳರಿಗೆ ವಿಷಯ ಮುಟ್ಟಿಸಿದಾಗ ಅವರೆಲ್ಲರೂ ಆಕೆಯನ್ನು ಬಿಟ್ಟು, ಮನೆ ದೋಚಲು ಬಂದಿದ್ದನ್ನು ಬಿಟ್ಟು ಬರಿಗೈಲಿ ಪರಾರಿಯಾಗಿದ್ದಾರೆ.


ಇದೆಲ್ಲವೂ ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕುರಿತಾಗಿ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net