

ದೈವಾಂಶಸಂಭೂತ, ಲೋಕೋಧ್ಧಾರಕ ಹಾಗೂ ಪುನರುತ್ಥಾನದ ಪುಣ್ಯ ಜೀವಿ ಯೇಸು ಕ್ರಿಸ್ತನ ಬದುಕಿನ ಕಥನ ಅಪರೂಪ ಮತ್ತು ಅಸಾಮಾನ್ಯ ವಾದುದು. ಅದು ಬೆತ್ಲೆಹೇಮ್ ನಝುರೇತ್, ಜೆರೂಸಲೇಮ್ ಅಥವ ಮರಿಯಮ್ಮನ ಪವಿತ್ರ ಗರ್ಭದಿಂದ ಆರಂಭಗೊಂಡುದಲ್ಲ. ಅದು ಅನೇಕ ತಲೆಮಾರುಗಳ, ಶತಮಾನಗಳ ಪೂರ್ವದಲ್ಲಿ ಪ್ರವಾದಿಗಳು ಉಸುರಿದ ಭವಿಷ್ಯ ನುಡಿಗಳಲ್ಲಿ ಸ್ಪಷ್ಟವಾಗಿ ಪ್ರಕಟಗೊಂಡಿತ್ತು. ಈ ಬಗ್ಗೆ ಪ್ರವಾದಿ ಯೆಶಾಯ ನೂರಾರು ಸಂವತ್ಸರಗಳ ಹಿಂದೆಯೇ ಹೀಗೆಂದು ಭವಿಷ್ಯ ನುಡಿದಿದ್ದ: ಇಸ್ರಯೇಲಿನ ಯೆಹೂದಿಗಳ ನಡುವಿನ ದಾವೀದನ ಕುಲದ ಕನ್ಯೆಯೋರ್ವಳು ಗಂಡು ಮಗುವೊಂದನ್ನು ಹೆರುವಳು. ಆತ ತನ್ನ ಜನರನ್ನು ಪಾಪ ಶಾಪಗಳಿಂದ ಮುಕ್ತಿಗೊಳಿಸಿ, ಇಲ್ಲಿ ಸಾಮ್ರಾಜ್ಯವೊಂದನ್ನು ಸ್ಥಾಪಿಸುವನು. ಆದರೆ, ಅದು ರಾಜಕೀಯ ಮೇಲಾಟದಿಂದ ಕೆಲ ವರ್ಷಗಳಲ್ಲೆ ನಾಶವಾಗಬಹುದಾದ ಭೂಮಿ ಮೇಲಿನ ಅಸ್ಥಿರ ಸಾಮ್ರಾಜ್ಯವಲ್ಲ. ಬದಲಿಗೆ ನರಮಾನವರನ್ನು ಈ ಲೋಕದ ಸಂಕೋಲೆಗಳಿಂದ ಸ್ವತಂತ್ರಗೊಳಿಸಿ, ಅವರು ಸದಾ ಸಂತೃಪ್ತರಾಗಿ ಇರಬಹುದಾದ ದೈವೀ ಸಾಮ್ರಾಜ್ಯ. ಆದರೆ, ಕ್ರಿಸ್ತ ವೈಭವೋಪೇತ
ವಾದ ಅರಸನ ಅರಮನೆಯಲ್ಲಿ ಜನಿಸಲಿಲ್ಲ. ಬಡ ಬಡಗಿಯ ಕುಟುಂಬಕ್ಕೆ ಸೇರಿದವನಾಗಿ, ದನ ಕರು, ಕುರಿಗಳ ಆವಾಸಸ್ಥಾನವಾದ ಕೊಟ್ಟಿಗೆಯಲ್ಲಿ ಜನಿಸಿದ. ಆತ ಶಿಶುವಾಗಿರುವಾಗಲೇ ಕ್ರೂರಿ ಹೆರೋದರಸನ ಕಾಟದಿಂದ ತಪ್ಪಿಸಿಕೊಳ್ಳಲು ಈಜಿಪ್ಟ್ ದೇಶಕ್ಕೆ ಪಲಾ ಯನ ಮಾಡಬೇಕಾಯಿತು. ನಂತರ ತಾಯ್ನಾಡಿಗೆ ಮರಳಿದ ಆತ ತನ್ನ ಮಾತು, ಕ್ರಿಯೆ ಹಾಗೂ ವರ್ತನೆಗಳಿಂದ ಒಂದು ಸಾಮಾಜಿಕ, ನೈತಿಕ ಹಾಗೂ ಧಾರ್ವಿುಕ ಕ್ರಾಂತಿಯ ಕಹಳೆಯನ್ನೇ ಮೊಳಗಿಸಿದ. ತಾರತಮ್ಯಗಳನ್ನು ಮೀರಿ ಮಾನವೀಯತೆ ಯನ್ನು ಮೆರೆಯುತ್ತ, ಕುರುಡರು, ಕುಂಟರು ಮತ್ತು ದಿವ್ಯಾಂಗರನ್ನು ತನ್ನ ಸ್ಪರ್ಶ ಮಾತ್ರದಿಂದ ಗುಣ ಪಡಿಸಿದ. ಅಕಾಲ ಮರಣ ಹೊಂದಿದ ದೈವ ಭಕ್ತರನ್ನು ಮತ್ತೆ ಬದುಕಿಸಿದ. ಅಗತ್ಯ ಬಿದ್ದಾಗಲೆಲ್ಲ ಪವಾಡಗಳನ್ನು ಮೆರೆದ. ಕೊನೆ ಗೊಂದು ದಿನ ಅನ್ಯಾಯದ ವಿಚಾರಣೆಗೊಳಗಾಗಿ ಶಿಲುಬೆ ಮರದ ಮೇಲೆ ಜಡಿಸಿಕೊಂಡು ಲೋಕ ಕಲ್ಯಾಣಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ. ಮುಂದೆ ಮೂರೇ ದಿನ ಗಳಲ್ಲಿ ಸಾವನ್ನು ಜಯಿಸಿ ಮೃತ್ಯುಂಜಯನಾಗಿ ತನ್ನ ಶಿಷ್ಯರ ನಡುವೆ ಕಾಣಿಸಿಕೊಂಡ.