

ಬೆಂಗಳೂರು: ಕರ್ನಾಟಕದ ಹಿರಿಮೆ ಗರಿಮೆ ಜತೆಗೆ ಕನ್ನಡ ನಾಡಿನ ಭಾವೈಕ್ಯತೆಯನ್ನು ಜಾಗೃತಗೊಳಿಸುವ ಕೆಲಸಕ್ಕೆ ಆದ್ಯತೆ ಸಿಗಬೇಕಿದೆ ಎಂದು ಅದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ದುಬೈನಲ್ಲಿ ಕನ್ನಡದ ಒಕ್ಕೂಟ ಮತ್ತು ದುಬೈ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಸ್ಮರಣೆಗಾಗಿ ಕನ್ನಡ ಪರಂಪರೆ ಮತ್ತು ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಕನ್ನಡಿಗರ ಏಕತೆಯ ಪ್ರತಿಬಿಂಬವಾಗಿ ಈ ಉತ್ಸವ ನಡೆದಿದೆ. ಇದು ಕನ್ನಡ ನಾಡು ಮತ್ತು ಭಾವೈಕ್ಯತೆಯನ್ನು ಜಾಗೃತಗೊಳಿಸುವ ಮಹತ್ವದ ಕಾರ್ಯವಾಗಿದೆ. ಉತ್ಸವದ ಮೂಲಕ ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಸ್ಮರಿಸುವ ಮತ್ತು ಪ್ರೇರಣೆ ನೀಡುವ ಕೆಲಸ ಆಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಸಂಘಟಕ ಕಿರಣ್ ಗೌಡ ಮಾತನಾಡಿ, ನಮ್ಮ ಪರಂಪರೆ, ಸಂಸ್ಕೃತಿ ಮತ್ತು ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಮುಂದಿನ ತಲೆಮಾರಿಗೂ ಪರಿಚಯಿಸಲು ಈ ಉತ್ಸವ ಆದರ್ಶಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ ದುಬೈ ಹಾಗೂ ಇನ್ನಿತರ ಸ್ಥಳಗಳಲ್ಲಿ ಆಚರಿಸಲು ಚಿಂತನೆ ನಡೆದಿದೆ ಎಂದರು.
ಇದೇ ವೇಳೆ ಕನ್ನಡದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕರಾದ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ್, ರವಿಕುಮಾರ್ ಗಣಿಗ, ಮೇಲ್ಮನೆ ಸದಸ್ಯ ಸಿ.ಟಿ. ರವಿ, ಹಾಗೂ ದುಬೈ ಕನ್ನಡದ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.
ನಮ್ಮ ನಾಡು-ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯ. ಹೊರದೇಶದಲ್ಲಿ ಕನ್ನಡ ಡಿಂಡಿಮ ಪ್ರತಿಧ್ವನಿಸುವ ಕೆಲಸ ಆಗಾಗ್ಗೆ ನಡೆಯುತ್ತಿರಬೇಕು.
- ಉಪೇಂದ್ರ, ಚಿತ್ರನಟ