ಪಿಇಎಸ್‌ಐಟಿಎಂ ಕಾಲೇಜಿಗೆ ನ್ಯಾಕ್‌ನಿಂದ ಎ ಗ್ರೇಡ್ ಮಾನ್ಯತೆ

PESITM College
ಪಿಇಎಸ್ ಐಟಿಎಂ ಕಾಲೇಜು
Published on

ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಪಿಇಎಸ್ ಐಟಿಎಂ(ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್) ಕಾಲೇಜಿಗೆ ನ್ಯಾಕ್(ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ) ಸಂಸ್ಥೆಯಿಂದ ಎ ಗ್ರೇಡ್ ಮಾನ್ಯತೆ ದೊರೆತಿದೆ.

ಪಿಇಎಸ್ ಐಟಿಎಂ ಕಾಲೇಜು ಮಲೆನಾಡು ವಿಭಾಗದ ವಿದ್ಯಾರ್ಥಿ ಸಮೂಹಕ್ಕೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿನ ಅವಶ್ಯಕತೆಗಳನ್ನು ಈಡೇರಿಸುವಲ್ಲಿ ಪೂರಕವಾಗಿ ಅತ್ಯವಶ್ಯವಿರುವ ಕಲಾ ಕೌಶಲ್ಯತೆ ಹಾಗೂ ತಾಂತ್ರಿಕ ಚಾಕಚಕ್ಯತೆಗಳನ್ನು ಮೂಡಿಸಿ ವೃದ್ಧಿಸುವಲ್ಲಿ ತನ್ನದೇ ಆದ ವಿನೂತನ ಮಾದರಿಗಳನ್ನು ಪ್ರಾಯೋಗಿಕವಾಗಿ ಪ್ರಚುರಪಡಿಸುವಲ್ಲಿ ಸದಾಕಾಲ ಶ್ರಮಿಸುತ್ತಿದೆ.
ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡುವ ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟ ನ್ಯಾಕ್ ಈ ಮೊದಲು ಪಿಇಎಸ್ ಐಟಿಎಂ ವಿದ್ಯಾಸಂಸ್ಥೆಯ ಶ್ರೇಷ್ಠ ಗುಣಮಟ್ಟವನ್ನು ಪರಿಶೀಲಿಸಿ ಎ++ ಮಾನ್ಯತೆ ನೀಡಿತ್ತು. ಇದೀಗ ಗುಣಮಟ್ಟ ಪರಿಶೀಲನಾ ಪ್ರಕ್ರಿಯೆಯಲ್ಲಿ ಸಫಲತೆ ಸಾಧಿಸಿ ಎ ಗ್ರೇಡ್ ಮಾನ್ಯತೆ ಪಡೆದಿದೆ.
ಇದರಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಅಧಿಕವಾಗಲಿದೆ. ಮೌಲ್ಯಾಧಾರಿತ ಶಿಕ್ಷಣ ಪಡೆಯುವಲ್ಲಿ ಪೂರಕವಾಗುವ ಪರಿಸರವನ್ನು ನಿರ್ಮಿಸುವಲ್ಲಿ ಮತ್ತು ವಿದ್ಯಾರ್ಥಿ ಸಮೂಹದ ಜ್ಞಾನಾರ್ಜನೆ, ಪ್ರಾಯೋಗಿಕ ಕೌಶಲ್ಯಗಳನ್ನು ಆಮೂಲಾಗ್ರವಾಗಿ ವೃದ್ಧಿಸುವಲ್ಲಿ ಈ ಮಾನ್ಯತೆ ಸಹಕಾರಿಯಾಗಲಿದೆ. ಅಲ್ಲದೆ, ಅದ್ವಿತೀಯ ಬೋಧನಾ ಹಾಗೂ ಕಲಿಕಾ ಗುಣಮಟ್ಟ, ಸಂಶೋಧನಾ ಕ್ಷೇತ್ರದಲ್ಲಿ ಜರುಗುತ್ತಿರುವ ಪ್ರಯತ್ನಗಳ ಪ್ರಸ್ತುತತೆಯನ್ನು ಗುರುತಿಸುವಲ್ಲಿ ಹಾಗೂ ತನ್ಮೂಲಕ ವಿದ್ಯಾರ್ಥಿ ಸಮೂಹವು ಅಸಾಧಾರಣ ಸಂಶೋಧನೆಗಳನ್ನು ಕೊಡುಗೆಗಳಾಗಿ ನೀಡಿ ಮಾನವ ಸಮಾಜದ ಏಳ್ಗೆಗೆ ಶ್ರಮಿಸುವಲ್ಲಿ ಭದ್ರ ಬುನಾದಿ ಸೃಷ್ಟಿಸಲು ನೆರವಾಗಲಿದೆ. ಪ್ರತಿಷ್ಠಿತ ಕಂಪನಿಗಳಲ್ಲಿ ನೇಮಕಾತಿಗಳ ಸಂಖ್ಯೆ ಹೆಚ್ಚುವಲ್ಲಿ ನ್ಯಾಕ್‌ನ ಈ ಮಾನ್ಯತೆಯು ಭದ್ರ ಅಡಿಪಾಯವಾಗಲಿದೆ.
ಈ ಕಾರ್ಯದಲ್ಲಿ ಸರ್ವತೋಮುಖ ಸಹಕಾರವನ್ನು ನೀಡಿದ ವಿದ್ಯಾಸಂಸ್ಥೆಯ ಎಲ್ಲ ವಿಭಾಗದ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ ಎಲ್ಲರನ್ನು ಆಡಳಿತ ಮಂಡಳಿ, ಪ್ರಾಚಾರ್ಯ ಡಾ. ಎಂ.ವಿ.ಚೈತನ್ಯಕುಮಾರ್ ಹಾಗೂ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ಆರ್.ನಾಗರಾಜ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net